

ಔರಾದ್: ಹವಾಮಾನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಹೆಚ್ಚೆಚ್ಚು ಸಸಿ ನೆಟ್ಟು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡು ಪರಿಸರ ಉಳಿಸಬೇಕು ಎಂದು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ ಗಜರೆ ಸಲಹೆ ನೀಡಿದರು.
ಬೋರಾಳ ಹತ್ತಿರದ ಪ್ರಾದೇಶಿಕ ಸಸ್ಯ ಕಾಶಿಗೆ ಭೇಟಿ ನೀಡಿದ ಅವರು, ಮನುಷ್ಯನ ಅತಿಯಾಸೆಗೆ ಪ್ರತಿವರ್ಷ ಗಿಡ-ಮರಗಳು ಬಲಿಯಾಗುತ್ತಿವೆ. ಇದರಿಂದ ಪರಿಸರಕ್ಕೆ ಹಾನಿಯಾಗಿ ಮಳೆ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಕೃತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಸಸಿ ನೆಟ್ಟು ಪೋಷಣೆ ಮಾಡುವ ಅಗತ್ಯವಿದೆ ಎಂದರು.
ಬೋರಾಳ ಸಸ್ಯ ಕ್ಷೇತ್ರ ಉತ್ತಮವಾಗಿದೆ. ಬರುವ ವರ್ಷ ಹೆಚ್ಚಿನ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಯೋಜನೆ ಹಾಕಿಕೊಳ್ಳಬೇಕು. ನೆರಳೆ, ಹುಣಸೆ, ಬೇವು, ಮಹಾಗನಿ, ಅರಳಿ, ಆಲ, ಬಸರಿ, ಶಿವನಿ, ಅತ್ತೆ, ಬಿದಿರು ಇತರ ಜಾತಿ ಸಸಿಗಳನ್ನು ಕಾಳಜಿ ವಹಿಸಿ ಬೆಳೆಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಜಮೀನು, ರಸ್ತೆ ಬದಿ, ರುದ್ರಭೂಮಿ ಸೇರಿ ವಿವಿಧೆಡೆ ಸಸಿ ನೆಡಬೇಕು. ರೈತರೊಂದಿಗೆ ಉತ್ತಮ ರೀತಿಯಿಂದ ವರ್ತಿಸಿ ಅಗತ್ಯವಿರುವ ಸಸಿಗಳನ್ನು ನೀಡಬೇಕು ಎಂದರು.
ವಲಯ ಅರಣ್ಯಾಧಿಕಾರಿ ಮಹ್ಮದ್ ಅಲಿಯುದ್ದೀನ್, ಬಸವರಾಜ ಚಟ್ನಾಳ್ ಇತರರಿದ್ದರು.