

ಔರಾದ್: ವಿಜ್ಞಾನ ವಿಷಯವನ್ನು ಕೇವಲ ಓದಿ ಅರಿಯುವುದರಿಂದ ಪ್ರಯೋಜನವಾಗಲ್ಲ. ಅದಕ್ಕೆ ಪ್ರಯೋಗದ ಮೂಲಕ ತೋರಿಸಿದರೆ ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಗಸ್ತ್ಯ ವಿಜ್ಞಾನ ಕೇಂದ್ರದ ಸಹಯೋಗದಡಿ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಅವರು, ಪಠ್ಯ ಪುಸ್ತಕದ ವಿಷಯಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬೋಧಿಸುವುದರಿಂದ ಪ್ರಯೋಜನ ಕಡಿಮೆ. ಬದಲಾಗಿ ಪ್ರಾಯೋಗಿಕವಾಗಿ ಅರ್ಥ ಮಾಡಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ ಮತ್ತು ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.
ಅಗಸ್ತ್ಯ ವಿಜ್ಞಾನ ಸಂಸ್ಥೆ ಕಲ್ಯಾಣ ಕರ್ನಾಟಕ ವಿಭಾಗದ ವಲಯ ಅಧಿಕಾರಿ ಶ್ರೀನಿವಾಸ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಕಲಿತರೂ ಕಮ್ಮಿ. ಹೀಗಾಗಿ ಶಿಕ್ಷಕರಿಗೆ ಸಂಸ್ಥೆ ನಿರಂತರ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.
ಬಿಆರ್.ಸಿ ಪ್ರಕಾಶ ರಾಠೋಡ್, ಮುಖ್ಯಗುರು ಧೂಳಪ್ಪ ಮಾಳೆನೋರ್, ಮಹಾದೇವ ಚಿಟಗೀರೆ, ಇನಾಯತ್ ಅಲಿ, ಬಲಭೀಮ ಕುಲಕರ್ಣಿ, ಶಶಿಕಾಂತ, ಶ್ರೀನಿವಾಸ, ವೀರೇಶ ಪಾಂಚಾಳ ಇದ್ದರು.