ಹೊನ್ನಿಕೇರಿ ಅರಣ್ಯದಲ್ಲಿ ಚಿರತೆ ಪತ್ತೆ

Chirate
Published on

ಬೀದರ್: ಹೊನ್ನಿಕೇರಿ ಹತ್ತಿರದ ಅರಣ್ಯದಲ್ಲಿ ಶನಿವಾರ ಚಿರತೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಆರು ತಿಂಗಳ ಹಿಂದಷ್ಟೇ ಚಿರತೆ ಪತ್ತೆಯಾಗಿತ್ತು. ಇದೀಗ ಮತ್ತೆ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಚಿರತೆ ಇರುವುದು ದೃಢಪಟ್ಟಿದೆ. ಅರಣ್ಯ ಸುತ್ತಲಿನ ಹೊನ್ನಿಕೇರಿ, ಚೊಂಡಿ, ಚೌಳಿ, ಅತಿವಾಳ, ಕಪಲಾಪುರ ಗ್ರಾಮಸ್ಥರು ಜಾಗ್ರತೆಯಿಂದ ಇರಬೇಕು ಎಂದು ಡಿಎಫ್ಒ ವಾನತಿ ಎಂ.ಎಂ. ಹೇಳಿದ್ದಾರೆ.
ಅರಣ್ಯದ ಒಳಗಡೆ ಓಡಾಟ ಬೇಡ. ಸಂಜೆ ವೇಳೆ ಹೊರಬರುವಾಗ ಎಚ್ಚರಿಕೆ ವಹಿಸಬೇಕು. ಮನೆ ಹೊರಭಾಗದಲ್ಲಿ ರಾತ್ರಿ ಯಾರೂ ಮಲಗಬಾರದು ಮನವಿ ಮಾಡಿರುವ ಅವರು, ಚಿರತೆ ಹಿಡಿಯಲು ಅರಣ್ಯ ಪ್ರದೇಶದ ವಿವಿಧ ಭಾಗಗಳಲ್ಲಿ ಬೋನು ಹಾಕಲಾಗುತ್ತಿದೆ. ಅಲ್ಲದೆ ಎರಡು ವಿಶೇಷ ತಂಡ ರಚಿಸಿದ್ದು, ಚಿರತೆ ಶೋಧ ಕಾರ್ಯ ಶುರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗಡಿ ಜಿಲ್ಲೆ ಬೀದರ್ ನಲ್ಲಿ ಈ ಹಿಂದೆ ಚಿರತೆ ಕಾಣಿಸುತ್ತಿರಲಿಲ್ಲ. ಆದರೆ ಕಳೆದ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಚಿರತೆ ಪತ್ತೆಯಾಗಿದೆ. ಕಳೆದ ಏಪ್ರಿಲ್ ನಲ್ಲಿ ಹೊನ್ನಿಕೇರಿ ಅರಣ್ಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲು ಜನವಾಡ ಬಳಿ ಪತ್ತೆಯಾಗಿತ್ತು. ಮೂರು ತಿಂಗಳ ಹಿಂದಷ್ಟೇ ಬಾವಗಿ ಗ್ರಾಮ ಶಿವಾರದ ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಚಿರತೆ ಶವ ಸಿಕ್ಕಿತ್ತು. ಇದೀಗ ಮತ್ತೆ ಹೊನ್ನಿಕೇರಿಯಲ್ಲಿ ಪತ್ತೆಯಾಗಿದ್ದರಿಂದ ಆ ಭಾಗದ ಜನ ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net