

ಬೀದರ್: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಮುಂದುವರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದಿಂದ ನಗರದಲ್ಲಿ ಶುಕ್ರವಾರ ಸಹಿ ಸಂಗ್ರಹಿಸಲಾಯಿತು.
ಸಂಘದ ಪದಾಧಿಕಾರಿಗಳು ನಗರದ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಪಾಲಕರ ಸಹಿ ಸಂಗ್ರಹ ಮಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ದೇಶದ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ. ವ್ಯಾಪಕ ಚರ್ಚೆ ನಂತರ ರೂಪುಗೊಂಡಿದೆ. ವಿದ್ಯಾರ್ಥಿಗಳ ಹಿತ ಅಡಗಿರುವ ಕಾರಣ ರಾಜ್ಯದಲ್ಲಿ ಇದನ್ನು ಯಾವುದೇ ಕಾರಣಕ್ಕೂ ರದ್ದುಪಡಿಸದೆ, ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಮುಖರಾದ ಬಸವರಾಜ ಸ್ವಾಮಿ, ರಾಜಶೇಖರ ಮಂಗಲಗಿ, ಪರಮೇಶ್ವರ ಬಿರಾದಾರ, ಸಂತೋಷಕುಮಾರ ಮಂಗಳೂರೆ, ಬಸವರಾಜ ಮುಗುಟಾಪುರೆ, ಈಶ್ವರಿ ಬೇಲೂರೆ, ಪಲ್ಲವಿ ಜೋಶಿ ಮತ್ತಿತರರು ಇದ್ದರು.