

ಬೀದರ್: ಕಮಲನಗರ ತಹಶೀಲ್ದಾರ್ ಕಚೇರಿಯಿಂದ ವಾರದೊಳಗೆ ಗೊಂಡ ಹಾಗೂ ಟೋಕರೆ ಕೋಳಿ ಸಮುದಾಯಗಳ ಅರ್ಹರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಕೊಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಗೊಂಡ ಸಮುದಾಯದ ಯುವ ಮುಖಂಡ ಸಂತೋಷಕುಮಾರ ಜೋಳದಾಪಕೆ ಎಚ್ಚರಿಸಿದ್ದಾರೆ.
ಕಮಲನಗರ ತಹಶೀಲ್ದಾರರು ಗೊಂಡ ಹಾಗೂ ಟೋಕರೆ ಕೋಳಿ ಸಮುದಾಯದವರಿಗೆ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ಸಮುದಾಯದವರು ಜಾತಿ ಪ್ರಮಾಣ ಪತ್ರಕ್ಕಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನಿಂದಲೂ ನಿಯಮಾನುಸಾರ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಅದು ಸಮುದಾಯಗಳ ಹಕ್ಕು ಕೂಡ ಆಗಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಪಂಗಡ ಪ್ರಮಾಣ ಪತ್ರಕ್ಕಾಗಿ ಗೊಂಡ ಹಾಗೂ ಟೋಕರೆ ಕೋಳಿ ಸಮುದಾಯದವರು ಸಲ್ಲಿಸಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ತಹಶೀಲ್ದಾರರಿಗೆ ನಿರ್ದೇಶನ ನೀಡಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.