

ಬೀದರ್: ಪ್ರತಿಯೊಬ್ಬರೂ ಜನ್ಮ ಕೊಟ್ಟ ತಂದೆ-ತಾಯಿ, ಅಕ್ಷರ ಕಲಿಸಿದ ಗುರು ಹಾಗೂ ಸಮಾಜದ ಋಣ ತೀರಿಸಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ನಗರದ ಚಿದಂಬರ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಶಿವಕುಮಾರೇಶ ಗುರುಕುಲ ಪ್ರಾಥಮಿಕ ಹಾಗೂ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರು ವಂದನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗುರು ಹಾಗೂ ಪಾಲಕರು ಹೆಮ್ಮೆ ಪಡುವಂತೆ, ಅವರಿಗೆ ಕೀರ್ತಿ ತರುವಂತೆ ಬದುಕಬೇಕು ಎಂದು ತಿಳಿಸಿದರು.
ಅನೇಕರು ವಿದ್ಯಾವಂತರಾಗಿ ಧನ ಗಳಿಸಿ, ಶ್ರೀಮಂತರಾಗುತ್ತಾರೆ. ಆದರೆ, ಅದನ್ನು ಕೊನೆಯವರೆಗೆ ಕಾಯ್ದುಕೊಂಡು ಹೋಗುವುದು ಮುಖ್ಯ. ಎಲ್ಲ ಅಪಾಯಗಳಿಗೂ ಉಪಾಯವಿದೆ. ಆದರೆ, ಒಂದಕ್ಕೆ ಇಲ್ಲ. ಉಪಕಾರ ಮಾಡಿಕೊಂಡು ಮರೆಯುವುದು ದೊಡ್ಡ ಪಾಪ ಎಂದು ಹೇಳಿದರು.
ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜನನ- ಮರಣ ಪರಮಾತ್ಮನ ಕೈಯಲ್ಲಿದೆ. ಅದರ ಮಧ್ಯದ ಜೀವನ ಮಾತ್ರ ಮನುಷ್ಯನ ಕೈಯಲ್ಲಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒಳ್ಳೆಯ ಆಲೋಚನೆಗಳೊಂದಿಗೆ ಸಾರ್ಥಕ ಬದುಕು ಸಾಗಿಸಬೇಕು ಎಂದು ಸಲಹೆ ಮಾಡಿದರು.
ಗುರು ಶಿಷ್ಯನಿಂದ ಅಪೇಕ್ಷಿಸುವುದು ಗೌರವ, ಪ್ರೀತಿಯನ್ನು ಮಾತ್ರ. ಅದನ್ನು ಬಿಟ್ಟು ಬೇರೇನೂ ಅಲ್ಲ. ಹೀಗಾಗಿ ಗುರುಗಳನ್ನು ಸದಾ ಗೌರವದಿಂದ ಕಾಣಬೇಕು ಎಂದು ಸಲಹೆ ಮಾಡಿದರು.
ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಶಿಷ್ಯನ ಉನ್ನತಿ ಕಂಡು ಖುಷಿ ಪಡುವವನೇ ಗುರು. ಶಾಲೆಯಲ್ಲಿ ಅಕ್ಷರ ಕಲಿತು, ವಿವಿಧ ಉನ್ನತ ಹುದ್ದೆಗಳಲ್ಲಿ ಇರುವ ಹಳೆಯ ವಿದ್ಯಾರ್ಥಿಗಳು 22 ವರ್ಷಗಳ ನಂತರ ಒಟ್ಟಿಗೆ ಸೇರಿ, ಗುರುವಿಗೆ ವಂದನೆ ಸಲ್ಲಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಅಂತಸ್ತು, ಅಧಿಕಾರ, ಐಶ್ವರ್ಯಕ್ಕಿಂತ ಗುರುಗಳು, ಸ್ನೇಹ, ಪ್ರೀತಿ ದೊಡ್ಡದು ಎಂದು ಸಾರುವ ಸ್ನೇಹ ಸಮ್ಮಿಲನ ಇದಾಗಿದೆ ಎಂದರು.
ಹಳೆಯ ವಿದ್ಯಾರ್ಥಿಗಳು ನಿವೃತ್ತರಾಗಿರುವ ಹಾಗೂ ಸದ್ಯ ಸೇವೆಯಲ್ಲಿರುವ ಗುರುಗಳನ್ನು ಸನ್ಮಾನಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ವಿರೂಪಾಕ್ಷ ಗಾದಗಿ, ಜಗದೀಶ ಬಿರಾದಾರ, ಮಲ್ಲಿಕಾರ್ಜುನ ಔದತಪುರೆ, ಡಾ. ಪೂಜಾ ಸೂರ್ಯವಂಶಿ ಮಾತನಾಡಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶೆಟಕಾರ್, ಶಿವಶರಣಪ್ಪ ಸಾವಳಗಿ, ಉದಯಭಾನು ಹಲವಾಯಿ, ಈಶ್ವರಗೌಡ ಜಿ. ಪಾಟೀಲ, ಭಾರತಬಾಯಿ ಕಣಜಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಇದ್ದರು. ಗುರುಕುಲದ ಮುಖ್ಯಶಿಕ್ಷಕ ಬಸವರಾಜ ಮ್ಯಾಗೇರಿ ಸ್ವಾಗತಿಸಿದರು.