ನಮ್ಮ ಆಚರಣೆ ವೈಜ್ಞಾನಿಕ ಸತ್ಯ

vidyaranya school
Published on

ಬೀದರ್: ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಒಯ್ಯುವ ಸಂಕೇತವೇ ದೀಪ ಪೂಜನ ಎಂದು ಬಸವಕಲ್ಯಾಣ ಗವಿಮಠದ ಪೂಜ್ಯಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಹಾಗೂ ಕೇಶವ ಕಾರ್ಯ ಸಂವರ್ಧನ ಸಮಿತಿಯಿಂದ ನಗರದ ವಿದ್ಯಾರಣ್ಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೀಪ ಪೂಜನ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೇಷ್ಠ ಕೆಲಸ ಮಾಡುವಾಗ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಹಾಗೆಯೇ ಮಾತೆಯರು ಮಕ್ಕಳ ಸರ್ವಾಂಗೀಣ ವಿಕಾಸದ ಸಂಕಲ್ಪ ತೊಟ್ಟು ದೀಪ ಹಚ್ಚಬೇಕು ಎಂದು ತಿಳಿಸಿದರು.
ದೀಪವನ್ನು ಕಣ್ಣಿನಿಂದ ನೋಡಿದಾಗ ಒಂದು ಅದ್ಭುತ ಶಕ್ತಿ ಸಂಚಾರವಾಗುತ್ತದೆ. ನಮ್ಮಲ್ಲಿನ ಅಂಧಕಾರ ಅಳಿಸಿ ಬೆಳಕು ಮೂಡಿಸುವ ಸಂಕೇತವೂ ಇದಾಗಿದೆ. ಭಾರತೀಯರ ಪ್ರತಿಯೊಂದು ಆಚರಣೆಗಳು ವೈಜ್ಞಾನಿಕ ಸತ್ಯ ಒಳಗೊಂಡಿವೆ. ಅಂತೆಯೇ ಶತಮಾನಗಳಿಂದಲೂ ಚಾಲ್ತಿಯಲ್ಲಿವೆ. ಸಮಾಜದಲ್ಲಿ ಸಂಸ್ಕೃತಿ, ಆಚಾರ-ವಿಚಾರ ತರುವ ಕೆಲಸಗಳನ್ನು ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಮಾಡುತ್ತಿದೆ. ದೀಪದಂತೆ ನಾವೆಲ್ಲರೂ ಬೆಳಗುತ್ತ ಬಾಳೋಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ. ಸಜ್ಜನಶೆಟ್ಟಿ ಮಾತನಾಡಿ, ಪ್ರತಿ ವರ್ಷ ಸಂಸ್ಥೆಯಲ್ಲಿ ದೀಪ ಪೂಜನ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಸನಾತನ ಕಾಲದಿಂದ ಇದುವರೆಗೂ ರೂಢಿಯಲ್ಲಿದೆ. ಉತ್ತಮ ಸಮಾಜ, ದೇಶದ ಒಳಿತಿಗಾಗಿ ಹಾಗೂ ಒಳ್ಳೆಯ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿದೆ ಎಂದರು.
ಸಮಿತಿ ಕಾರ್ಯದರ್ಶಿ ಹನುಮಂತರಾವ ಪಾಟೀಲ್, ಸದಸ್ಯ ನಾರಾಯಣರಾವ ಮುಖೇಡಕರ್, ಮಾಣಿಕೇಶ್ವರಿ ಪಾಟೀಲ್, ರಮಾ ಕುಲಕರ್ಣಿ ಇದ್ದರು. ಜ್ಯೋತಿ ಕುಂಬಾರ ನಿರೂಪಣೆ ಮಾಡಿದರು. ಸುಧಾ ಕಲ್ಲಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net