

ಹುಮನಾಬಾದ್: ಕ್ಷೇತ್ರದಲ್ಲಿ ಬರುವ ದಿನಗಳಲ್ಲಿ ಕುಡಿವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ, ಕೂಲಿಕಾರ್ಮಿಕರಿಗೆ ಉದ್ಯೋಗ ಸಮಸ್ಯೆಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸೂಚನೆ ನೀಡಿದರು.
ತಹಸಿಲ್ ಕಚೇರಿಯಲ್ಲಿ ಶನಿವಾರ ತಾಲೂಕು ಮಟ್ಟದ ಟಾಸ್ಕ್ ಫೋಸ್೯ ಸಭೆ ನಡೆಸಿದ ಅವರು, ಬರ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು. ಕೂಲಿ ಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿ ಕೆಲಸ ಕೊಡಬೇಕು. ಜಾನುವಾರಗಳಿಗೆ ಮೇವು ಮತ್ತು ಕುಡಿವ ನೀರಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಕೃಷಿ, ತೋಟಗಾರಿಕೆ ಬಗ್ಗೆ ಹೆಚ್ಚಿನ ಗಮನ ನೀಡಿ ರೈತರಿಗೆ ಸಹಾಯ ಒದಗಿಸಬೇಕು ಎಂದು ಹೇಳಿದರು.
ಸರ್ಕಾರದ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.
ತಹಸೀಲ್ದಾರ್ ಅಂಜುಂ ತಬಸ್ಸುಮ್, ತಾಲೂಕು ಪಂಚಾಯಿತಿ ಇಒ ಡಾ.ಗೋವಿಂದ, ಸಹಾಯಕ ಕೃಷಿ ನಿರ್ದೇಶಕ ಗೌತಮ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂತೋಷ ತಾಂಡೂರ ಇತರರಿದ್ದರು.