ಪ್ರತಿ ಹಳ್ಳಿಯಲ್ಲೂ ನೀರಿನ ತೊಟ್ಟಿ ನಿರ್ಮಿಸಿ

beldale meeting
Published on

ಬೀದರ್: ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆಗಾಗಿ ದಕ್ಷಿಣ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸೂಚಿಸಿದರು.
ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳು ನೀರನ ದಾಹ ತೀರಿಸಿಕೊಳ್ಳಲು ಪರದಾಡುತ್ತಿವೆ. ಹೀಗಾಗಿ ತೊಟ್ಟಿ ನಿರ್ಮಾಣ ಮಾಡಿ, ಅದಕ್ಕೆ ಆಯಾ ಗ್ರಾಮ ಪಂಚಾಯಿತಿಯಿಂದ ನೀರಿನ ಪೈಪ್ ಲೈನ್ ಅಳವಡಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಮಳೆ ಕಮ್ಮಿಯಾಗಿರುವ ಕಾರಣ ಮೇವಿನ ಕೊರತೆಯಾಗುವ ಸಾಧ್ಯತೆ ಇದೆ. ಸರ್ಕಾರಿ ಗೋಮಾಳ ಜಮೀನಿನಲ್ಲಿ ಮೇವಿನ ಬ್ಯಾಂಕ್ ಅಥವಾ ಮೇವು ಮತ್ತು ನೀರು ಸಂಗ್ರಹ ಘಟಕ ನಿರ್ಮಿಸಬೇಕು. ಬಿಡಾಡಿ ಜಾನುವಾರುಗಳನ್ನು ಗುರುತಿಸಿ ಗೋಶಾಲೆಗೆ ಒಪ್ಪಿಸಬೇಕು. ಮೇವಿನ ಕೊರತೆ ಇದ್ದರೆ ರೈತರಿಂದ ಖರೀದಿಸಿ ಗೋಶಾಲೆಗೆ ಒದಗಿಸಬೇಕು. ಯಾವ ಕಾರಣಕ್ಕೂ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಶು ಸಂಗೋಪನೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲಾ-ಕಾಲೇಜು, ವಸತಿನಿಲಯಗಳಲ್ಲಿ ನೀರಿನ ಕೊರತೆ ಇದ್ದರೆ ಕೊಳವೆಬಾವಿ ಕೊರೆಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ದಿಲ್ಶಾನ್ ಮಹಾಂತ್, ತಾಪಂ ಇಒ ಕಿರಣ ಪಾಟೀಲ್, ಕಂದಾಯ, ಕೃಷಿ, ತೋಟಗಾರಿಕೆ, ಪಶು, ಕಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net