

ಹುಮನಾಬಾದ್: ಜಿಲ್ಲೆ ರೈತರ ಜೀವನಾಡಿಯಾಗಿರುವ ಹಳ್ಳಿಖೇಡ್(ಬಿ) ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಶೀಘ್ರ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಾರ್ಖಾನೆ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿ ಹೊರಬರಬೇಕು ಎಂದು ಕಾರ್ಖಾನೆ ಮಾಜಿ ನಿರ್ದೇಶಕ ಸುಭಾಷ ಗಂಗಾ ಆಗ್ರಹಿಸಿದ್ದಾರೆ.
26 ಸಾವಿರ ರೈತ ಷೇರುದಾರರನ್ನು ಹೊಂದಿರುವ ಕಾರ್ಖಾನೆ ಕೆಲ ವರ್ಷಗಳಿಂದ ಬಂದ್ ಆಗಿದ್ದರಿಂದ ಬೆಳೆಗಾರರು ಪರದಾಡಬೇಕಾಗಿದೆ. ತಕ್ಷಣವೇ ಕಾರ್ಖಾನೆ ಆರಂಭಿಸಿ ರೈತರು ಮತ್ತು ಕಾರ್ಮಿಕರಿಗೆ ನೆರವಾಗಬೇಕು. ಇಲ್ಲದಿದ್ದಲ್ಲಿ ಕುರ್ಚಿ ಬಿಟ್ಟು ಹೋಗಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಾರ್ಷಿಕ ಮಹಾಸಭೆ ಕರೆಯುತ್ತಿಲ್ಲ. ಕಾರ್ಖಾನೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ಮಿಕರು ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕುಟುಂಬಗಳು ಬೀದಿಗೆ ಬಂದಿವೆ. ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿಯೇ ನೇರ ಹೊಣೆ. ಕೂಡಲೇ ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ರದ್ದು ಮಾಡಿ ಸರ್ಕಾರದಿಂದಲೇ ಕಾಖರ್ಾನೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಸಂಸ್ಥೆಯಾಗಿರುವ ಬಿಎಸ್ಸೆಸ್ಕೆ ಉಳಿಸುವುದು ಮುಖ್ಯ. ಇದರಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಕಾರ್ಖಾನೆ ನಡೆಸಲು ಆಡಳಿತ ಮಂಡಳಿಯವರು ಒಂದಿಲ್ಲೊಂದು ನೆಪ ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ಷೇರು ಸದಸ್ಯರ ಸಭೆ 17ರಂದು
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಉಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಡಿ.17ರಂದು ಕಾರ್ಖಾನೆ ಆವರಣದಲ್ಲಿ ಷೇರುದಾರ ಸದಸ್ಯರು, ಕಬ್ಬು ಬೆಳೆಗಾರರು, ಕಾರ್ಖಾನೆ ಕಾರ್ಮಿಕರು ಸೇರಿ ಪ್ರಮುಖರ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ಸುಭಾಷ ಗಂಗಾ ತಿಳಿಸಿದರು. ಆಡಳಿತ ಮಂಡಳಿ ವಿರುದ್ಧ ಕ್ರಮ ಹಾಗೂ ಕಾರ್ಖಾನೆ ಆರಂಭಿಸುವ ಕುರಿತು ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಬಳಿ ನಿಯೋಗ ಕೊಂಡೊಯ್ದು ಸರ್ಕಾದ ಮೇಲೆ ಒತ್ತಡ ಹೇರಬೇಕಿದೆ. ಹೀಗಾಗಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಆಗಮಿಸಬೇಕು ಎಂದು ಕೋರಿದರು.