

ಹುಮನಾಬಾದ್: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸಂಸದರ ಕ್ರೀಡಾ ಮಹಾಮೇಳ ಆಯೋಜನೆ ಮಾಡಿದ್ದಾರೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಮಾಣಿಕನಗರದ ಮಾಣಿಕಪ್ರಭು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹಾಮೇಳದಲ್ಲಿ ಓಪನ್ ಜಿಮ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗುತ್ತದೆ. ಧೈರ್ಯ ಮತ್ತು ಸಾಹಸ ಗುಣಗಳನ್ನು ಸಹ ವೃದ್ಧಿಸಲಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ಪಠ್ಯದ ಜತೆ ಪಠ್ಯೇತರ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ದೇಶದ ಅಭಿವೃದ್ಧಿ, ರಕ್ಷಣೆ ಜತೆಗೆ ಕ್ರೀಡಾ ಕ್ಷೇತ್ರಕ್ಕೂ ಪ್ರಧಾನಿ ಮೋದಿ ಹೆಚ್ಚು ಒತ್ತು ನೀಡಿದ್ದಾರೆ. ಜಿಲ್ಲೆಯಲ್ಲಿ ವಾರದಿಂದ ನಡೆದ ತಾಲೂಕು ಮಟ್ಟದ ಕ್ರೀಡಾ ಮಹಾಮೇಳ ಸಮಾರೋಪಗೊಳ್ಳುತ್ತಿದ್ದು, ಡಿ.16ರಂದು ಬೀದರ್ ನಲ್ಲಿ ಜಿಲ್ಲಾ ಮಟ್ಟದ ಮೇಳ ನಡೆಯಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪಂಚಶೀಲಾ ಹೆಗ್ಗಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಡಾ.ಗೌತಮ ಅರಳಿ, ಮಹಾಮೇಳ ಸಂಯೋಜಕ ಶಿವರಾಜ ಕಣಜೆ, ಬಿಇಒ ಪ್ರೀತಮ ಜಾಧವ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಜಮಾದಾರ, ಪ್ರಮುಖರಾದ ಸಂತೋಷ ಪಾಟೀಲ್, ಭದ್ರೇಶ ಪಾಟೀಲ್, ಮಲ್ಲಿಕಾರ್ಜುನ ಕುಂಬಾರ, ಗಜೇಂದ್ರ ಕನಕಟ್ಟಾಕರ್, ಪ್ರಭಾಕರ ನಾಗರಾಳೆ, ಗಿರೀಶ ತುಂಬಾ, ಮಲ್ಲಿಕಾರ್ಜುನ ಸೀಗಿ, ಮಾಣಿಕರಡ್ಡಿ ಕರಣಿ, ರಾಜು ಭಂಡಾರಿ, ರವಿ ಹೊಸಳ್ಳಿ ಇತರರಿದ್ದರು.
ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೆ ಮಾರ್ಗ ಹೆಚ್ಚಳ, ವಿಮಾನಯಾನ ಆರಂಭ ಸೇರಿ ಬಹಳಷ್ಟು ಜನೋಪಯೋಗಿ ಕೆಲಸ ಮಾಡಿದ್ದಾರೆ.| ಡಾ.ಸಿದ್ದಲಿಂಗಪ್ಪ ಪಾಟೀಲ್ಶಾಸಕ