ಏಡ್ಸ್ ಮುಕ್ತ ಸಮಾಜಕ್ಕಾಗಿ ಶ್ರಮಿಸೋಣ

brims
Published on

ಬೀದರ್: ಏಡ್ಸ್ ಬಗ್ಗೆ ಅನಗತ್ಯ ಆತಂಕ ಬೇಡ. ಎಚ್ಐವಿ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಮತ್ತು ಸೋಂಕಿತರೊಂದಿಗೆ ತಾರತಮ್ಯ ಮಾಡದೆ ಸಾಮಾನ್ಯರಂತೆ ಬದುಕಲು ಬಿಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ ಹೇಳಿದರು.
ಇಲ್ಲಿನ ಬ್ರಿಮ್ಸ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿ, ಏಡ್ಸ್ ನಾಲ್ಕು ವಿಧಾನಗಳಲ್ಲಿ ಮಾತ್ರ ಹರಡುವುದರಿಂದ ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಅಸುರಕ್ಷಿತ ಲೈಂಗಿಕ ಸಂಬಂಧ, ಸೋಂಕಿತ ವ್ಯಕ್ತಿಯ ಸಿರೆಂಜ್ ಬಳಕೆ, ಸೋಂಕಿತ ವ್ಯಕ್ತಿಯ ರಕ್ತ ಪರೀಕ್ಷೆ ಮಾಡದೆ ಬಳಸುವಿಕೆ ಮತ್ತು ಸೋಂಕಿತ ಗರ್ಭಿಣಿಯಿಂದ ಮಗುವಿಗೆ ರೋಗ ಹರಡುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವ ವಿಧಾನದಿಂದಲೂ ಎಚ್ಐವಿ ಹರಡಲು ಸಾಧ್ಯವಿಲ್ಲ ಎಂದರು.
ಎಚ್ಐವಿ ಸೋಂಕಿತರಿಗೆ ಸಾಮಾನ್ಯರಂತೆ ಬದುಕಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಮತ್ತು ಆರ್ಟಿ ಕೇಂದ್ರದಿಂದ ಔಷಧ ಉಚಿತ ನೀಡಲಾಗುತ್ತದೆ. ಸೋಂಕಿತ ಗರ್ಭಿಣಿ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡುವ ಮೂಲಕ ಎಚ್ಐವಿ ಸೋಂಕು ರಹಿತ ಮಗುವನ್ನು ನೀಡಲು ಸಾಧ್ಯವಾಗುತ್ತದೆ. ಏಡ್ಸ್ ಶೂನ್ಯಕ್ಕೆ ತರಲು ಸಾರ್ವಜನಿಕರ ಸಹಭಾಗಿತ್ವ ಬೇಕು ಎಂದು ಹೇಳಿದರು.
ಪಿಪಿಸಿಟಿ ವಿಭಾಗದ ಡಾ.ಸರಿತಾ ಬದಭದೆ ಮಾತನಾಡಿ, ಎಚ್ಐವಿ ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವ ಮೂಲಕ ಆರ್ವಿ ಚಿಕಿತ್ಸೆಯಿಂದ ಮಗುವನ್ನು ಸೋಂಕು ಬಾರದಂತೆ ನೋಡಿಕೊಳ್ಳಬಹುದು ಎಂದರು.
ಡಾ.ಮಿಲನ್ ವರ್ಧನ್, ಡಾ.ಉಮಾ ದೇಶಮುಖ, ಡಾ. ಜಯಶ್ರೀ ಸ್ವಾಮಿ ಮಾತನಾಡಿದರು. ಅನೀತಾ, ಲಕ್ಷ್ಮಿ, ಸುಶೀಲಾ, ಸುರೇಖಾ ಇತರರಿದ್ದರು. ಸುನೀತಾ ಸ್ವಾಗತಿಸಿದರು. ಅರವಿಂದ ಕುಲಕರ್ಣಿ ನಿರೂಪಣೆ ಮಾಡಿದರು. ಸಂಜುಕುಮಾರ ಬುಯ್ಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net