ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತನ್ನಿ

vakilar sang
Published on

ಬೀದರ್: ನ್ಯಾಯ ಕೊಡಿಸುವ ವಿಚಾರಕ್ಕೆ ಸಾಂವಿಧಾನಿಕವಾಗಿ ಹೋರಾಟ ನಡೆಸುವ ನ್ಯಾಯವಾದಿಗಳ ರಕ್ಷಣೆಗೆ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ವಕೀಲರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೋಟ್೯ ಕಲಾಪ ಬಹಿಷ್ಕರಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ, ರಾಜ್ಯಾದ್ಯಂತ ವಕೀಲರ ಮೇಲೆ ಹಲ್ಲೆ ಘಟನೆ ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾಲ್ಕಿಯಲ್ಲಿ ಇತ್ತೀಚೆಗೆ ನ್ಯಾಯವಾದಿ ಧನಲಕ್ಷೀ ಮೇಲೆ ರಾತ್ರಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಡಿಸಿಗೆ ಮನವಿ ಸಲ್ಲಿಸಿದರೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಗುರುವಾರ ಕಲಬುರಗಿಯಲ್ಲಿ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ್ ಕೊಲೆ ಮಾಡಲಾಗಿದೆ. ಇಂಥ ಘಟನೆಗಳಿಂದ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಮಹೇಶಕುಮಾರ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಬಂಬುಳಗೆ, ಉಪಾಧ್ಯಕ್ಷ ಹೇಮಾ ಬಿರಾದಾರ, ಜಂಟಿ ಕಾರ್ಯದರ್ಶಿ ರವಿಕಾಂತ ಪಾಟೀಲ್, ಖಜಾಂಚಿ ಕೋಮಲ ಪಾಟೀಲ್ ಇತರರಿದ್ದರು.
ರಾಜ್ಯಾದ್ಯಂತ ವಕೀಲರ ರಕ್ಷಣೆ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂಬ ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net