ಹಿರಿಯರಿಗೆ ಬೇಕು ಪ್ರೀತಿ ಕಾಳಜಿ

Gurunanak Dev ashram
Published on

ಬೀದರ್: ಹಿರಿಯರು ಉತ್ತಮ ಆರೋಗ್ಯ, ಘನತೆ, ಪ್ರೀತಿ, ವಾತ್ಸಲ್ಯ ಹಾಗೂ ಆರ್ಥಿಕ ಸ್ವಾತಂತ್ರ್ಯದ ಜೀವನ ಬಯಸುತ್ತಾರೆ. ಅವರ ಅಗತ್ಯ ಮತ್ತು ಕಾಳಜಿ ಅರ್ಥ ಮಾಡಿಕೊಂಡು ಮಕ್ಕಳು, ಕುಟುಂಬದವರು ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಎನ್.ಕೆ. ಪಾಟೀಲ್ ಹೇಳಿದರು.
ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಷನ್ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಇಲ್ಲಿ ನಗರದಲ್ಲಿ ಏರ್ಪಡಿಸಿದ್ದ ಗುರುನಾನಕ ದೇವ್ ವೃದ್ಧಾಶ್ರಮದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಹಿರಿಯರ ಆರೈಕೆಗೆ ಎಲ್ಲರೂ ಮೊದಲ ಆದ್ಯತೆ ಕೊಡಬೇಕು. ಹಿರಿಯರು ಸಮಾಜದ ದೊಡ್ಡ ಮಾರ್ಗದರ್ಶಕರು ಎಂದರು.
ಗುರುನಾನಕ ದೇವ್ ವೃದ್ಧಾಶ್ರಮ ಪವಿತ್ರ ಗುರುದ್ವಾರ ಪರಿಸರದಲ್ಲಿದೆ. ದೇವರ ಆಶೀರ್ವಾದವೂ ಸಿಗಲಿದೆ. ಎಲ್ಲ ರೀತಿಯ ಸೌಲಭ್ಯ ಮತ್ತು ಒಳ್ಳೆಯ ವಾತಾವರಣವಿದೆ. ಹಿರಿಯರ ಉತ್ತಮ ಆರೈಕೆ ನಡೆದಿರುವುದು ಶ್ಲಾಘನೀಯ. ಧಾರ್ಮಿಕ ಜತೆಗೆ ಗುರುನಾನಕ ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.
ಸಂಸ್ಥೆ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಮಾತನಾಡಿ, ಹಿರಿಯರಿಗೆ ಅನುಕೂಲ ಮತ್ತು ಆರೈಕೆ ಮಾಡುವ ಉದ್ದೇಶದಿಂದ ವೃದ್ಧಾಶ್ರಮ ಆರಂಭಿಸಲಾಗಿದೆ. ಇದಕ್ಕೀಗ ಒಂದು ವರ್ಷ ಭರ್ತಿಯಾಗಿದ್ದು, ಇಲ್ಲಿನ ಎಲ್ಲರಿಗೆ ಸಕಲ ಸೌಲಭ್ಯ ಒದಗಿಸಿ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ನಿವೃತ್ತ ಐಪಿಎಸ್ ಅಕಾರಿ ಸರ್ದಾರ್ ಪ್ರೀತಮ್ಸಿಂಗ್, ನಾನಕ್ ಝೀರಾ ಸಾಹೇಬ್ ಫೌಂಡೇಷನ್ ಕಾರ್ಯದರ್ಶಿ ಸರ್ದಾರ್ ನಾನಕ್ಸಿಂಗ್, ಡಾ.ಸಿ.ಮನೋಹರ ಇತರರಿದ್ದರು. ಆಶ್ರಮದ ಎಲ್ಲ ಹಿರಿಯರಿಗೆ ಚಳಿಗಾಲದ ಕಿಟ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net