ಅಕ್ಕನ ಸಮಗ್ರ ಲೇಖನ ಸಂಗ್ರಹ ಶ್ಲಾಘನೀಯ

gorucha
Published on

ಬೀದರ್: ಜಾಗತಿಕ ಮಹಿಳೆಯರ ಸ್ವಾಭಿಮಾನದ ಸಂಕೇತರಾಗಿರುವ ಮಹಾಶಿವಶರಣೆ ವೈರಾಗ್ಯ ನಿ ಅಕ್ಕ ಮಹಾದೇವಿ ಅವರ ಸಮಗ್ರ ಲೇಖನಗಳ ಸಂಗ್ರಹ ಯೋಜನೆ ಅದ್ಭುತ ಕಾರ್ಯವಾಗಿದೆ ಎಂದು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ, ಹಿರಿಯ ಜಾನಪದ ವಿದ್ವಾಂಸ ಡಾ.ಗೊ.ರು. ಚನ್ನಬಸಪ್ಪ ಬಣ್ಣಿಸಿದರು.
ನೌಬಾದ್ ಹತ್ತಿರದ (ಭಾಲ್ಕಿ ರಸ್ತೆ) ಜ್ಞಾನ ಶಿವಯೋಗಾಶ್ರಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಕೈಗೆತ್ತಿಕೊಂಡಿರುವ ಅಕ್ಕಮಹಾದೇವಿ ಪ್ರಕಟಿತ ಲೇಖನಗಳ ಸಂಗ್ರಹ ಕಾರ್ಯ ನೋಡಿ ಮಾತನಾಡಿ, ಇದೊಂದು ಪವಿತ್ರ ಮತ್ತು ಅಸಾಧಾರಣವಾದ ಕೆಲಸ. ಎಂದೋ ಆಗಬೇಕಿತ್ತು. ಇಂಥ ಲೇಖನಗಳನ್ನು ಸಂಗ್ರಹಿಸುವ ಕೆಲಸ ಸುಲಭವಲ್ಲ. ಕಷ್ಟಕರ ಕೆಲಸವನ್ನು ಪೂಜ್ಯರು ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಇಡೀ ಬಸವಾದಿ ಶರಣರ ಸಮೂಹದಲ್ಲಿ ಅಕ್ಕಮಹಾದೇವಿ ವ್ಯಕ್ತಿತ್ವ ಮೇರು ಶಿಖರ. ಅವರ ವಚನಗಳೂ ಅಷ್ಟೇ ಎತ್ತರದಲ್ಲಿವೆ. ಹೀಗಾಗಿ ಅವರ ಸಮಕಾಲಿನ ಶರಣರು, ನಂತರದ ದಿನಗಳಲ್ಲಿ ಶ್ರೇಷ್ಠ ಕವಿ, ಸಾಹಿತಿಗಳು ಅಕ್ಕನ ಬಗ್ಗೆ ಬರೆದ ಸಾವಿರಾರು ಲೇಖನಗಳಿವೆ. ಅವೆಲ್ಲ ಸಂಗ್ರಹಿಸಿ ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದಿಂದ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಕಾರ್ಯ ಬೇಗ ಸಾಕಾರವಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಆಶ್ರಮದ ಅಧಿಪತಿ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಮಾತನಾಡಿ, ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿ ಪೂಜ್ಯ ಕರುಣಾದೇವಿ ಮಾತಾ ಅವರ ಸದಿಚ್ಛೆಯಂತೆ ಅಕ್ಕಮಹಾದೇವಿ ಬಗ್ಗೆ ಪ್ರಕಟಿತ ಲೇಖನಗಳ ಸಂಗ್ರಹ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ ನೂರು ವರ್ಷದ ನೂರಾರು ಲೇಖನಗಳನ್ನು ಸಂಗ್ರಹಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದರು.
ಹಸ್ತಪ್ರತಿ ವಿದ್ವಾಂಸ ಅಶೋಕ, ಡಾ.ಜಗನ್ನಾಥ ಹೆಬ್ಬಾಳೆ, ಕಂಟೆಪ್ಪ ಭಂಗೂರೆ, ಮಹಾಂತೇಶ ಡೊಂಗರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net