ಖಂಡ್ರೆ ಅಪ್ಪಟ ಬಸವ ತತ್ವ ಅನುಯಾಯಿ

6blk1
Published on

ಭಾಲ್ಕಿ: ಮಾಜಿ ಸಚಿವರಾದ ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.
ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿವಾಸಕ್ಕೆ ಬುಧವಾರ ಸಾಣೇಹಳ್ಳಿ ಪೂಜ್ಯರು ಹಾಗೂ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಭೇಟಿ ನೀಡಿ ನೂರು ವಸಂತ ಪೂರೈಸಿರುವ ಖಂಡ್ರೆ ಅವರಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಆಶೀರ್ವದಿಸಿದ ಅವರು, ಖಂಡ್ರೆ ರಾಜ್ಯದ ಆಸ್ತಿ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿ ಗಡಿ ಭಾಗ ಬೀದರ್ ಜಿಲ್ಲೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ಡಾ.ಭೀಮಣ್ಣ ಖಂಡ್ರೆ ಜೀವನದುದ್ದಕ್ಕೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅತ್ಯುತ್ತಮ ಸಮಾಜ ಸೇವೆ ಮಾಡಿದ್ದಾರೆ. ಜತೆಗೆ ಅಪ್ಪಟ ಬಸವ ತತ್ವ ಅನುಯಾಯಿ ಆಗಿ ರಾಜ್ಯಾದ್ಯಂತ ಸಂಚರಿಸಿ ವಚನ ಸಾಹಿತ್ಯವನ್ನು ಪ್ರಚಾರ-ಪ್ರಸಾರ ಮಾಡಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದೀಗ ನೂರು ವಸಂತ ಪೂರೈಸಿರುವುದು ಸಂತಸ ತಂದಿದೆ. ಇನ್ನಷ್ಟು ದೀರ್ಘಕಾಲ ಅವರಿಗೆ ಬಸವಣ್ಣನವರು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುವೆ ಎಂದರು.
ಯುವ ಮುಖಂಡ ಸಾಗರ ಖಂಡ್ರೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net