

ಬೀದರ್: ಇಂಗ್ಲಿಷ್ ಭಾಷೆ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಅಗತ್ಯ. ಇಂಗ್ಲಿಷ್ ಕಲಿಕೆ ಹೆಚ್ಚಾದಂತೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಉತ್ತರ ಪ್ರದೇಶದ ವೆಂಕಟೇಶ್ವರ ವಿದ್ಯಾಲಯದ ಹಿರಿಯ ಆಂಗ್ಲ ಪ್ರಾಧ್ಯಾಪಕ ಡಾ.ಉಮಾಕಾಂತ ಪಾಟೀಲ್ ಹೇಳಿದರು.
ನಗರದ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದ ಎಲ್ಲ ಭಾಷೆಗಳ ನಾಯಕ ಸ್ಥಾನದಲ್ಲಿ ಇಂಗ್ಲಿಷ್ ಇದೆ. ಎಲ್ಲರೂ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಂಗ್ಲಿಷ್ ಕಲಿಯಬೇಕು ಎಂದು ಸಲಹೆ ನೀಡಿದರು.
ಇಂಗ್ಲಿಷ್ ಬಗೆಗಿನ ಭಯದ ಕಲ್ಪನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಹೀಗಾಗಿ ಇಂಗ್ಲಿಷ್ ಕಲಿಕೆಯಲ್ಲಿ ಮುಂದೆ ಬರದಿರುವುದು ವಿಷಾದಕರ ಸಂಗತಿ. ಮನುಷ್ಯನಿಗೆ ಎಷ್ಟೆಷ್ಟು ಭಾಷೆಗಳ ಮೇಲೆ ಹಿಡಿತವಿರುತ್ತದೆಯೋ ಜ್ಞಾನದ ಮಟ್ಟ ಅಷ್ಟು ವ್ಯಾಪಕವಾಗುತ್ತದೆ. ಇಂಗ್ಲಿಷ್ ಜಗತ್ತಿನ ಎಲ್ಲೆಡೆ ಜ್ಞಾನ ನೀಡುವಂತಹ ಮಹತ್ವದ ಭಾಷೆಯಾಗಿದೆ. ಹೀಗಾಗಿ ಈ ಭಾಷೆ ಬಗೆಗಿರುವ ಭಯ, ಆತಂಕ ಬಿಟ್ಟು ಅದನ್ನು ಓದುವ, ಬರೆಯುವ, ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೊದಲ ಗೋಷ್ಠಿಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ವಿದ್ಯಾ ಪಾಟೀಲ್, 2ನೇ ಗೋಷ್ಠಿಯಲ್ಲಿ ಸಿದ್ಧಾರ್ಥ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಗಿರೀಶ ಮೀಸೆ, 3ನೇ ಗೋಷ್ಠಿಯಲ್ಲಿ ಸಕರ್ಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಶೀಲಾ ಎನ್.ಎಸ್. ಉಪನ್ಯಾಸ ನೀಡಿದರು. ಸಿದ್ಧಾರ್ಥ ಕಾಲೇಜಿನ ಪ್ರಾಚಾರ್ಯ ಗೋಪಾಲ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಸ್ವಾಮಿ ನಿರೂಪಣೆ ಮಾಡಿದರು. ವಿವಿಧ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.