ಮೀಸಲು ಅನುದಾನ ಸೌಲಭ್ಯ ಪಡೆಯಿರಿ

angavikalara din
Published on

ಬೀದರ್: ಅಂಗವಿಕಲರ ಸಬಲೀಕರಣಕ್ಕಾಗಿ ಎಲ್ಲ ಇಲಾಖೆಯಲ್ಲಿ ಶೇ.5 ಅನುದಾನ ಮೀಸಲಿಡಲಾಗಿದ್ದು, ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
ನಗರದ ಝಿರಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಂಗವಿಕಲರ ಬದುಕು ಸವಾಲಿನಿಂದ ಕೂಡಿದೆ. ಆದರೆ ಅವರಲ್ಲೂ ವಿಶೇಷ ಸಾಮಥ್ರ್ಯ ಇದೆ. ಸಾಕಷ್ಟು ಅಂಗವಿಕಲರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಂಗವಿಕಲರಿಗೆ ಸರ್ಕಾರದ ಜತೆಯಲ್ಲಿ ಸಮಾಜದ ಸಹಕಾರ, ಪ್ರೋತ್ಸಾಹ ಸಿಕ್ಕರೆ ಮುಖ್ಯ ವಾಹಿನಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಂಗವಿಕಲರಿಗೆ ಸರ್ಕಾರದಿಂದ ತ್ರಿಚಕ್ರ ವಾಹನ, ಮಾಸಾಶನ ಸೇರಿ ಹಲವಾರು ಸೌಲಭ್ಯಗಳಿವೆ. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರಚಾರ ಮಾಡಿ, ಜಾಗೃತಿ ಮೂಡಿಸಬೇಕು. ಸರ್ಕಾರದ ಸೇವೆ ಅಂಗವಿಕಲರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಅಂಗವಿಕಲತೆ ಎನ್ನುವುದು ದೈಹಿಕ ಅಥವಾ ಮಾನಸಿಕವಾಗಿ ಇರಬಹುದು. ಆದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರು ನಮಗೆ ಮಾರ್ಗದರ್ಶಕರಾಗುತ್ತಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ, ಡಾ.ಬಿ.ಆರ್.ಅಂಬೇಡ್ಕರ್ ಕಲ್ಚರಲ್ ಸೊಸೈಟಿ ವ್ಯವಸ್ಥಾಪಕ ಅನೀಲಕುಮಾರ ಬೆಲ್ದಾರ್, ಜಿಲ್ಲಾ ವಿಕಲಚೇತನ ಇಲಾಖೆ ಅಧಿಕಾರಿ ನಾಗರಾಜ ಮಠ, ಮೊಗಲಪ್ಪ ಮಾಳಗೆ ಇತರರಿದ್ದರು. ಸಾಧಕ ಅಂಗವಿಕಲರಿಗೆ ಮತ್ತು ಉತ್ತಮ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಇಲಾಖೆ, ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಸ್ವಯಂ ಸೇವಾ ಸಂಘ ಸಂಸ್ಥೆಗಳ ವತಿಯಿಂದ ದಿನಾಚರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net