

ಕಮಲನಗರ: ಪಟ್ಟಣದಲ್ಲಿದ್ದ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ವಿಜಯಕುಮಾರ ನೇತೃತ್ವದ ತಂಡ ದಾಳಿ ನಡೆಸಿತು.
ಡಾ.ಬಿಹಾರಿ ಕ್ಲಿನಿಕ್, ಲಕ್ಷ್ಮಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ನಕಲಿ ಮಾತ್ರೆ ಮತ್ತು ಔಷಧಗಳನ್ನು ಜಪ್ತಿ ಮಾಡಲಾಯಿತು. ಜಿಲ್ಲಾ ಆರೋಗ್ಯ ಇಲಾಖೆ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವೈದ್ಯಕೀಯ ಮಂಡಳಿ ನೀಡುವ ಪರವಾನಗಿ ಪತ್ರ ಪರಿಶೀಲಿಸಿದ ಬಳಿಕ ಪರವಾನಗಿ ಇಲ್ಲದ ಕ್ಲಿನಿಕ್ ಗಳಿಗೆ ಬೀಗ ಹಾಕಲಾಯಿತು.
ತಾಲೂಕಿನ ಗಡಿ ಗ್ರಾಮಗಳಲ್ಲಿ ವೈದ್ಯರ ಕೊರತೆಯಿಂದ ನಕಲಿ ಕ್ಲಿನಿಕ್ ಮತ್ತು ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು, ತಾತ್ಕಾಲಿಕ ಔಷಧ ನೀಡಿ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಹೈಡೋಸ್ ಚಿಕಿತ್ಸೆ ನೀಡುತ್ತಿರುವ ಈ ವೈದ್ಯರು, ರೋಗಿಗಳ ಸ್ಥಿತಿ ಗಂಭೀರವಾದಲ್ಲಿ ದೂರದ ಆಸ್ಪತ್ರೆಗಳಿಗೆ ಕೊಂಡೊಯ್ಯುವಂತೆ ಸೂಚನೆ ನೀಡುತ್ತಿದ್ದಾರೆ. ಇದರಿಂದ ರೋಗಿ ಮತ್ತವರ ಕುಟುಂಬದವರ ಯಾತನೆ ಕೇಳುವವರು ಇಲ್ಲದಂತಾಗಿತ್ತು.
ಸರ್ಕಾರದ ಆದೇಶದಂತೆ ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಮುಂದಾಗಿದೆ. ಕಮಲನಗರದ 4 ಕ್ಲಿನಿಕ್ ಹಾಗೂ ಮುರ್ಕಿ ಗ್ರಾಮದ 2 ಕ್ಲಿನಿಕ್ ಮೇಲೆ ದಾಳಿ ನಡೆಸಿ ಬೀಗ ಹಾಕಿದ್ದು, ಕಾನೂನು ಕ್ರಮ ಜರುಗಿಸುವುದಾಗಿ ಟಿಎಚ್ಓ ಡಾ.ಗಾಯತ್ರಿ ತಿಳಿಸಿದ್ದಾರೆ.
ಅಗತ್ಯ ಪದವಿ ಪಡೆಯದೆ ಜನರ ಜೀವದ ಜತೆ ಚೆಲ್ಲಾಟವಾಡುವ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಡಿ. ನಕಲಿ ವೈದ್ಯರು ಚಿಕಿತ್ಸೆ ನೀಡುವುದು ಕಂಡುಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತನ್ನಿ. ನಿಯಮಾವಳಿ ಉಲ್ಲಂಘಿಸಿ ನಕಲಿ ವೈದ್ಯರು ಸಾರ್ವಜನಿಕರಿಗೆ ಚಿಕಿತ್ಸೆ ನೀಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ನೋಡಲ್ ಅಧಿಕಾರಿ ಡಾ.ದಿಲೀಪ ಡೊಂಗರೆ, ಸಿಪಿಐ ಅಮರಪ್ಪ ಎಸ್., ಪಿಎಸ್ಐ ಚಂದ್ರಶೇಖರ ನಿರ್ಣೆ, ತಾಪಂ ಇಒ ಮಾಣಿಕರಾವ ಪಾಟೀಲ್, ವಿಷಯ ನಿರ್ವಾಹಕ ಮಹೇಶರಡ್ಡಿ ಇತರರಿದ್ದರು.