

ಬೀದರ್: ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಗತ್ಯವಿದೆ. ಇದಕ್ಕಾಗಿ ಮೌಲ್ಯಾಧಾರಿತ ಮತ್ತು ಕೌಶಲಯುಕ್ತ ಶಿಕ್ಷಣ ನೀಡಬೇಕಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್ ಹೇಳಿದರು.
ಬೀದರ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಾಹಿತ್ಯ ಸಂಘದಿಂದ ನಗರದಲ್ಲಿ ಆಯೋಜಿಸಿದ್ದ ಉನ್ನತ ಶಿಕ್ಷಣ ಉತ್ಕೃಷ್ಟತೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವೃತ್ತಿ ಕೌಶಲ ಜತೆಗೆ ವಿದ್ಯಾರ್ಥಿಗಳಲ್ಲಿ ಅಧ್ಯಯನ ಕೌಶಲ ಬೇಕು. ಸಂವಹನ ಕೊರತೆ ಮಕ್ಕಳನ್ನು ತೀವ್ರವಾಗಿ ಕಾಡುತ್ತಿದೆ. ಜಾಗತಿಕ ಸ್ಪರ್ಧೆಯೂ ಸವಾಲಾಗಿದೆ. ಇವೆಲ್ಲವುಗಳನ್ನು ಮೆಟ್ಟಿ ನಿಲ್ಲುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ ಎಂದರು.
ಯುಪಿಎಸ್ಸಿ, ಕೆಪಿಎಸ್ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಬಹಳ ಕಮ್ಮಿ ಇದೆ. ಇದೊಂದು ಕಳವಳಕಾರಿ ಸಂಗತಿ. ಅಲ್ಲದೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದ ಅಗತ್ಯ ಇಂದು ಒತ್ತಿ ಹೇಳುತ್ತಿದೆ ಎಂದರು.
ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳು ಸಾವಿರಾರು ವರ್ಷಗಳ ಹಿಂದೆ ಜಾಗತಿಕ ಪ್ರಸಿದ್ಧಿ ಪಡೆದಿದ್ದವು. ಆದರೆ, ವಿಜ್ಞಾನ, ತಂತ್ರಜ್ಞಾನ ಇಷ್ಟೆಲ್ಲ ಬೆಳೆದ ನಂತರವೂ ನಮ್ಮಲ್ಲಿನ ಸಂಸ್ಥೆಗಳು ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿಲ್ಲ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವ ರೀತಿಯಲ್ಲಿ ಉನ್ನತ ಶಿಕ್ಷಣ ಬದಲಾಗಬೇಕಾಗಿದೆ ಎಂದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತರಬೇಕಾದ ಬದಲಾವಣೆ ಕುರಿತು ಪರಿಷತ್ ಗಂಭೀರ ಚಿಂತನೆ ನಡೆಸುತ್ತಿದೆ. ಶಿಕ್ಷಣ ತಜ್ಞರು, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಈ ಕ್ಷೇತ್ರದಲ್ಲಿನ ಕೊರತೆ ನಿವಾರಿಸಲು, ಸುಧಾರಣೆ ತರಲು ಸಿಎಂ ಅವರೂ ಸಮ್ಮತಿಸಿದ್ದಾರೆ. ಬರುವ ಬಜೆಟ್ನಲ್ಲಿ ಉನ್ನತ ಶಿಕ್ಷಣಕ್ಕೆ ಅಧಿಕ ಅನುದಾನ ಸಿಗುವ ವಿಶ್ವಾಸವಿದೆ ಎಂದರು.
ಬೀದರ್ ವಿವಿ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ.ಮೂಲಿಮನಿ, ಕೆಆರ್ಇ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಡಾ.ಅಬ್ದುಲ್ ಖದೀರ್, ಬಸವರಾಜ ದೇಶಮುಖ, ಡಾ.ಬಲಬೀರಸಿಂಗ್, ಶಂಕರರಾವ ಹೊನ್ನಾ, ಪ್ರೊ.ಕಲ್ಯಾಣರಾವ ಪಾಟೀಲ್ ಇತರರಿದ್ದರು. ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಪರಮೇಶ್ವರ ನಾಯಕ್ ಸ್ವಾಗತಿಸಿದರು. ರಾಜಕುಮಾರ ಹೆಬ್ಬಾಳೆ, ವೀರಶೆಟ್ಟಿ ಮೈಲೂರಕರ್ ನಿರೂಪಣೆ ಮಾಡಿದರು. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕಾಲೇಜು ಪ್ರಾಚಾರ್ಯರು, ಅಧ್ಯಾಪಕರು ಪಾಲ್ಗೊಂಡಿದ್ದರು.