25 ವರ್ಷ ಬಳಿಕ ಗುರು-ಶಿಷ್ಯರ ಸಮ್ಮಿಲನ

Halbarga School
Published on

ಬೀದರ್: ಭಾಲ್ಕಿ ತಾಲೂಕಿನ ಹಲಬರ್ಗಾ ಸರ್ಕಾರಿ ಪ್ರೌಢ ಶಾಲೆಯ 1997-98ನೇ ಎಸ್ಸೆಸ್ಸೆಲ್ಸಿ ಬ್ಯಾಚ್ ವಿದ್ಯಾರ್ಥಿಗಳು ಮತ್ತು ಅವರಿಗೆ ವಿದ್ಯೆ ಕಲಿಸಿದ ಗುರುಗಳ ಸಮ್ಮಿಲನ ಇಲ್ಲಿ ನಡೆಯಿತು. 25 ವರ್ಷಗಳ ನಂತರ ಗುರು-ಶಿಷ್ಯರ ಸಮ್ಮಿಲನ ವಿಶೇಷವಾಗಿತ್ತು.
ನಗರದಲ್ಲಿ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುಗಳಿಗೆ ವಂದನೆ ಸಲ್ಲಿಸಲಾಯಿತು. ಶಿಕ್ಷಕ ಹುದ್ದೆಯಿಂದ ನಿವೃತ್ತರಾದ ವೆಂಕಟೇಶರಾವ ಕುಲಕರ್ಣಿ, ಮಚ್ಛೇಂದ್ರ ಚಿಲ್ಲಾ, ಶಾಲಿವಾನ ಪಾರಶೆಟ್ಟಿ, ಗುರಪ್ಪ ಹಡಪದ,ಬಾಬುರಾವ ರಾಠೋಡ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಬೀದರ್ ಅಲ್ಲದೆ ಕಲಬುರಗಿ, ಹೈದರಾಬಾದ್, ಮುಂಬಯಿ, ಬೆಂಗಳೂರು ಸೇರಿ ವಿವಿಧ ಭಾಗಗಳಿಂದ 1997-98ರ ಬ್ಯಾಚ್ ವಿದ್ಯಾರ್ಥಿಗಳು ಬಂದಿದ್ದರು. 25 ವರ್ಷ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ಗುರುಗಳ ಸಮಾಗಮ ಸಂಭ್ರಮ ಮೂಡಿಸಿತ್ತು. ನಿವೃತ್ತ ಶಿಕ್ಷಕರು ಹಾಜರಿ ತೆಗೆದುಕೊಂಡು ಅಣಕು ಪಾಠ ಮಾಡಿದರು. ವಿದ್ಯಾರ್ಥಿಗಳನ್ನು ಗದರಿಸಿ ಛಡಿ ಏಟು ನೀಡಿ ಶಾಲಾ ದಿನಗಳಿಗೆ ಕರೆದೊಯ್ದರು. ವಿಡಿಯೋ ಪ್ರದರ್ಶನ ವಿದ್ಯಾರ್ಥಿಗಳ ಬಾಲ್ಯದ ನೆನಪುಗಳನ್ನು ಹಸಿರಾಗಿಸಿತು.
ನಿವೃತ್ತ ಶಿಕ್ಷಕ ವೆಂಕಟೇಶರಾವ ಕುಲಕರ್ಣಿ ಮಾತನಾಡಿ, ಗುರು-ಶಿಷ್ಯ ಸಂಬಂಧ ಬಹಳ ಪವಿತ್ರವಾದದ್ದು. ಗುರು ಯಾವಾಗಲೂ ಶಿಷ್ಯನ ಏಳಿಗೆಯನ್ನೇ ಬಯಸುತ್ತಾನೆ. ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ಗುರುಗಳು, ಹಿರಿಯರಿಗೆ ಗೌರವಾದರ ನೀಡಬೇಕು ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳಾದ ಕರ್ನಾಟಕ ಲೋಕಾಯುಕ್ತ ಬೀದರ್ ನ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ, ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಕಾಂತ ಮೂಲಗೆ, ವಕೀಲರಾದ ಮನೋಜಕುಮಾರ ಬುಕ್ಕಾ, ಸಂತೋಷ ಸ್ವಾಮಿ, ಹೈದರಾಬಾದ್ನ ಟ್ರಾನ್ಸ್ ಪೋರ್ಟ್ ಉದ್ಯಮಿ ಸಿದ್ರಾಮೇಶ ಪಾಟೀಲ್, ಸಂಗಮೇಶ ಬಿರಾದಾರ, ಜ್ಯೋತಿ ಸ್ವಾಮಿ, ಮಂಗಲಾ ಕುಂಬಾರ, ವಿಶಾಲಾಕ್ಷಿ ಸ್ವಾಮಿ, ನಾಗಮಣಿ ಪಾಟೀಲ್, ಸಿದ್ದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net