

ಕಮಲನಗರ: ವೈಯಕ್ತಿಕ ಓರೆ-ಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವರಾಜ ಕಣಜೆ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಹಯೋಗದಡಿ ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹಾಮೇಳ-2023ರಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅಂಥ ಪ್ರತಿಭೆ ಗುರುತಿಸುವ ಕೆಲಸ ಸಂಸದರ ಕ್ರೀಡಾ ಮಹಾಮೇಳದ ಮೂಲಕ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕುಮಾರ ಬಿಡವೆ ಮಾತನಾಡಿ, ಕ್ರೀಡಾ ಕ್ಷೇತ್ರ ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವ ಬೆಳೆಸುತ್ತದೆ. ನಿರಂತರ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದರ ಆಪ್ತ ಸಹಾಯಕ ಅಮರ ಹಿರೇಮಠ ಮಾತನಾಡಿ, 17 ವರ್ಷದೊಳಗಿನ ಮಕ್ಕಳು ಸಂಸದರ ಕ್ರೀಡಾ ಮಹಾಮೇಳದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹೊರಹಾಕಿ ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಬೆಳೆದು ಜಿಲ್ಲೆಗೆ ಕೀರ್ತಿ ತರವಂತರಾಗಬೇಕು ಎಂಬುದೇ ಈ ಕ್ರೀಡಾಕೂಟದ ಉದ್ದೇಶ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಇಒ ಮಾಣಿಕರಾವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಾಜಿರಾವ ಬೆಂಜರವಾಡೆ, ಅಮರ ಹಿರೇಮಠ, ಪಿಡಿಒ ರಾಜಕುಮಾರ ತಂಬಾಕೆ, ಪ್ರಾಚಾರ್ಯ ಓ.ಕೆ. ಪಾಟೀಲ್, ಪ್ರಾಂಶುಪಾಲ ಶಿವಾಜಿ ಆರ್.ಎಸ್., ಶಿವಕುಮಾರ ಸದಫುಲೆ, ಸಿಪಿಐ ಅಮರೆಪ್ಪ ಎಸ್., ಪಿಎಸ್ಐ ಚಂದ್ರಶೇಖರ ನಿಣರ್ೆ, ಯಶವಂತ ಬಿರಾದಾರ, ಲಿಂಗಾನಂದ ಮಹಾಜನ್, ರಾಮರಾವ ಜಾಧವ್, ಸೂರ್ಯಕಾಂತ ಬಿರಾದಾರ, ಬಸವರಾಜ ಪಾಟೀಲ್, ಬಾಲಾಜಿ ತೆಲಂಗ್, ರಾಕೇಶ ಪಾಟೀಲ್, ವೈಜಿನಾಥ ಗುಡ್ಡಾ, ರಾಜಕುಮಾರ ಗಾಯಕವಾಡ ಇತರರಿದ್ದರು.
ಜ್ಞಾನೇಶ್ವರ ಚಾಂಡೇಶ್ವರೆ ಸ್ವಾಗತಿಸಿದರು. ಮಾದಪ್ಪ ಮಡಿವಾಳ ನಿರೂಪಣೆ ಮಾಡಿದರು. ರಾಮೇಶ್ವರಿ ಬಾವಗೆ ವಂದಿಸಿದರು. ಮಹಾಮೇಳದಲ್ಲಿ ಕಮಲನಗರ, ಠಾಣಾಕುಶನೂರ, ಖೇಡ-ಸಂಗಮ, ಸೋನಾಳ, ಬೆಳಕುಣಿ, ಖತಗಾಂವ ಗ್ರಾಮದ ಸುಮಾರು 15 ಶಾಲಾ ತಂಡಗಳು ಭಾಗವಹಿಸಿದ್ದವು.