

ಬೀದರ್: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದಿಂದ ಸಂವಿಧಾನ ರಕ್ಷಣೆ-ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಡಿ.15ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯ ಸದಸ್ಯ, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದರು.
ನಗರದಲ್ಲಿ ಸಮಾವೇಶದ ಕರ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂವಿಧಾನ ಸಮರ್ಪಣಾ ದಿನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣದ ನಿಮಿತ್ತ ಸಮಾವೇಶ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಕೋರಿದರು.
ದೇಶದ ಪ್ರತಿಯೊಬ್ಬರೂ ಒಪ್ಪಿಕೊಂಡು ನಡೆಯಬೇಕಾದ ಪವಿತ್ರ ಗ್ರಂಥ ಸಂವಿಧಾನವಾಗಿದೆ. ಆದರೆ ಕೆಲವರು ಇದಕ್ಕೆ ವಿರೋಧಿಸಿ, ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈಗಿರುವ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಬಸವರಾಜ ಸಾಗರ, ಪ್ರಮುಖರಾದ ಬಾಬುರಾವ ಪಾಸ್ವಾನ್, ರಾಜಕುಮಾರ ಬನ್ನೇರ್, ರಮೇಶ ಮಂದಕನಳ್ಳಿ, ಓಂಕಾರ ಮೌರ್ಯ, ಮಾರುತಿ ಸಿಂಧೆ, ಸುಧಾಕರ ಮಳ್ಳೆ, ಉಮೇಶ ಬೋರಾಳೆ, ರಘುನಾಥ ಗಾಯಕವಾಡ, ಅಹ್ಮದ್ ಅಲಿಯಾಬಾದ್, ಲಕ್ಷ್ಮಣ ಹೊನ್ನಡಿ, ರಾಜು ಗಾದಗಿ ಇತರರಿದ್ದರು.