

ಬೀದರ್: ಅಪ್ರಾಪ್ತ ವಯಸ್ಸಿನ (18 ವರ್ಷದೊಳಗಿನ)ವರು ಬೈಕ್ ಓಡಿಸದಂತೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಗೋವಿಂದರಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು ಸೋಮವಾರ ಸೈಕಲ್ನಲ್ಲಿ ಕಚೇರಿಗೆ ಆಗಮಿಸಿ ಗಮನ ಸೆಳೆದರು. ಅಪ್ರಾಪ್ತರು ಕಡ್ಡಾಯವಾಗಿ ಸೈಕಲ್ ಬಳಸುವಂತೆ ಉತ್ತೇಜಿಸುವುದರ ಜತೆಗೆ ಪಾಲಕರು ಇವರ ಕೈಗೆ ಬೈಕ್ ಕೊಡದಂತೆ ಎಚ್ಚರಿಕೆ ಸಂದೇಶ ಸಹ ರವಾನಿಸಿದರು.
ಖಿಲಾ ಹತ್ತಿರದ ಡಿಸಿ ನಿವಾಸದಿಂದ ಇಬ್ಬರೂ ಸೈಕಲ್ನಲ್ಲಿ 4 ಕಿಮೀ ದೂರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಜಿಲ್ಲೆಯ ಎರಡು ಕಣ್ಣಿನಂತಿರುವ ಪ್ರಮುಖ ಅಧಿಕಾರಿಗಳ ಈ ಸೈಕಲ್ ಸಂಚಾರ ಸಾರ್ವಜನಿಕರನ್ನು ಆಕರ್ಷಿಸಿತು. ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ, ಅಪ್ರಾಪ್ತರಿಗೆ ವಾಹನ ಕೊಡಬಾರದು ಎಂಬ ಪ್ರಮುಖ ಅಜೆಂಡಾದಿಂದ ಡಿಸಿ, ಎಸ್ಪಿ ಸೈಕಲ್ ತುಳಿದು ಜನರಲ್ಲಿ ಜಾಗೃತಿ ಮೂಡಿಸಿದರು.
ಡಿಸಿ, ಎಸ್ಪಿ ಸೈಕಲ್ ನಲ್ಲಿ ಬರುತ್ತಿರುವಾಗ ಸಾರ್ವಜನಿಕರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಬಲು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಗಾಡಿ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡರೆ, ಮತ್ತೆ ಕೆಲವರು ವಿಡಿಯೋ ಶೂಟ್ ಮಾಡಿ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಧಿಕಾರಿಗಳ ಜನಹಿತ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಸೇರಿ ಜಿಲ್ಲೆಯಲ್ಲಿ ಅನೇಕ ಕಡೆ ಅಪ್ರಾಪ್ತ ಬಾಲಕ-ಬಾಲಕಿಯರು ಬೈಕ್ ಓಡಿಸುತ್ತಿರುವುದು ಗಮನಕ್ಕೆ ಬಂದಿದೆ. ಶಾಲಾ-ಕಾಲೇಜುಗಳಿಗೆ ಬೈಕ್ ತರುತ್ತಿದ್ದಾರೆ. ಪಾಲಕರು ಅಪ್ರಾಪ್ತರಿಗೆ ಬೈಕ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಹಿನ್ನೆಲೆಯಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು ಬೈಸಿಕಲ್ ನಲ್ಲಿ ಮನೆಯಿಂದ ಕಚೇರಿಗೆ ಆಗಮಿಸಿದ್ದೇವೆ. ಪಾಲಕರು ಕಡ್ಡಾಯವಾಗಿ ಅಪ್ರಾಪ್ತ ಮಕ್ಕಳಿಗೆ ಬೈಕ್ ಬದಲು ಬೈಸಿಕಲ್ ಕೊಡಬೇಕು. ಇದು ಸುರಕ್ಷಿತ ಸಂಚಾರ ಮತ್ತು ಮಕ್ಕಳ ಜೀವ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು ಡಿಸಿ, ಎಸ್ಪಿ ಮನವಿ ಮಾಡಿದರು.
ನೌಕರರು ವಾರಕ್ಕೊಮ್ಮೆ ಸೈಕಲ್ ಬಳಸಿ
ಸರ್ಕಾರಿ ನೌಕರರು ವಾರಕ್ಕೊಂದು ದಿನ ಸೈಕಲ್ ನಲ್ಲಿ ಕಚೇರಿಗೆ ಬರುವ ಸಂಪ್ರದಾಯ ಪ್ರಾರಂಭಿಸಬೇಕು ಎಂದು ಡಿಸಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ ಮನವಿ ಮಾಡಿದರು. ವಾಹನಕ್ಕಿಂತಲೂ ಸೈಕಲ್ ಬಳಸುವುದು ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ. ಪರಿಸರ ಉಳಿಸಿ ಬೆಳೆಸುವ ಜತೆಗೆ ಶರೀರದ ಸದೃಢತೆ, ವಿವಿಧ ರೋಗಗಳಿಂದ ದೂರವಿರಲು ಸೈಕಲ್ ಬಳಸುವುದು ತೀರ ಅಗತ್ಯ. ಅನೇಕ ಕಡೆ ಇಂದು ಸೈಕಲ್ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಆಗರ್ಭ ಶ್ರೀಮಂತರು ಸಹ ಸೈಕಲ್ ಸವಾರಿಗೆ ಸೈ ಎನ್ನುತ್ತಿರುವ ಅನೇಕ ಉದಾಹರಣೆಗಳಿವೆ. ನಾವೂ ಈ ನಿಟ್ಟಿನಲ್ಲಿ ಪೂರಕ ಹೆಜ್ಜೆಯಿಡಲು ಮುಂದಾಗಬೇಕು. ಸರ್ಕಾರಿ ನೌಕರರು ಒಂದು ದಿನ ಸೈಕಲ್ ಬಳಕೆಗೆ ಮುಂದಾದರೆ ಸಮಾಜಕ್ಕೆ ದೊಡ್ಡ ಸಂದೇಶ ರವಾನೆಯಾಗಲಿದೆ ಎಂದರು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದಿದ್ದರಿಂದಲೇ ಅನೇಕ ಅವಘಡ ಸಂಭವಿಸುತ್ತಿವೆ. ಅಮಾಯಕರು ಬಲಿಯಾಗುತ್ತಿದ್ದಾರೆ. ಅದೆಷ್ಟೋ ಕುಟುಂಬಗಳು ಜರ್ಜರಿತವಾಗಿವೆ. ಎಲ್ಲರೂ ರಸ್ತೆಗಿಳಿದಾಗ ಸಂಚಾರ ನಿಯಮ ಪಾಲಿಸುವುದಾಗಿ ಹಾಗೂ ಯಾವ ಕಾರಣಕ್ಕೂ ಅಪ್ರಾಪ್ತರಿಗೆ ಬೈಕ್ ಕೊಡಲ್ಲ ಎಂಬ ಸಂಕಲ್ಪ ಮಾಡಬೇಕು ಎಂದು ಕೋರಿದರು.