

ಬೀದರ್: ರಾಜ್ಯದಲ್ಲಿ ಹರಿದು ಹಂಚಿಹೋಗಿದ್ದ ಟೋಕರಿ ಕೋಲಿ (ಕೋಳಿ, ಕಬ್ಬಲಿಗ) ಸಮಾಜವನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದ ಕೀರ್ತಿ ವಿಠ್ಠಲ್ ಹೇರೂರ ಅವರಿಗೆ ಸಲ್ಲುತ್ತದೆ ಎಂದು ಟೋಕರಿ ಕೋಳಿ ಸಮಾಜ ಸಂಘದ ಬೀದರ್ ದಕ್ಷಿಣ ಅಧ್ಯಕ್ಷ ಷನ್ಮುಖಪ್ಪ ಶೇಕಾಪುರ ಹೇಳಿದರು.
ನಗರದಲ್ಲಿ ಸಂಘ ಏರ್ಪಡಿಸಿದ್ದ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ ಅವರ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೇರೂರ ಮಾಡಿರುವ ಹೋರಾಟ ಸಮಾಜಕ್ಕೆ ದಾರಿದೀಪವಾಗಿದೆ. ಅವರು ತೋರಿದ ಮಾರ್ಗದಲ್ಲಿ ಸಮಾಜದವರು ನಡೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಸುಮಾರು 50 ಲಕ್ಷ ಸಮಾಜದವರು 39 ಪರ್ಯಾಯ ಪದಗಳಿಂದ ಆಯಾ ಜಿಲ್ಲೆಯಲ್ಲಿ ಒಂದೊಂದು ಹೆಸರಿನಿಂದ ಕರೆಸಿಕೊಳ್ಳುತ್ತಾರೆ. ಎಲ್ಲರನ್ನು ಒಗ್ಗೂಡಿಸಿ ಬಲಿಷ್ಠವಾಗಿಸುವ ಕೆಲಸ ಹೇರೂರ ಮಾಡಿದ್ದಾರೆ. ಈಗ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ಮಾರ್ಗದರ್ಶನ ಸದಾ ಜೀವಂತವಾಗಿವೆ ಎಂದರು.
ಸಮಾಜದ ಮುಖಂಡರಾದ ಸುನೀಲ ಖಾಶೆಂಪುರ, ನಂದಕುಮಾರ ಜಮಗಿಕರ್, ಸುನೀಲ ಭಾವಿಕಟ್ಟಿ, ಗೋವಿಂದ ಜಾಲಿ, ಶರಣಪ್ಪ ಖಾಶೆಂಪುರ, ಶಿವಶಂಕರ ಫುಲೆ, ಪಂಢರಿ ನೇಳಗೆ ಇತರರಿದ್ದರು.