ಪಠ್ಯೇತರ ಶಿಕ್ಷಣಕ್ಕೂ ಆದ್ಯತೆ ಕೊಡಿ

Hallikhed
Published on

ಹುಮನಾಬಾದ್: ಪಠ್ಯಕ್ಕೆ ಸೀಮಿತವಾದ ಅಧ್ಯಯನವೇ ವಿದ್ಯಾರ್ಥಿ ಗುರಿ ಆಗಬಾರದು. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಯಂಥ ಪಠ್ಯೇತರ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಹಳ್ಳಿಖೇಡ(ಕೆ) ಹತ್ತಿರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಠ್ಯೇತರ ಶಿಕ್ಷಣವೇ ವಿದ್ಯಾರ್ಥಿಯ ನಿಜವಾದ ಬದುಕು ರೂಪಿಸಬಲ್ಲದು ಎಂದರು.
ಪಠ್ಯದಿಂದ ಜ್ಞಾನ, ಕ್ರೀಡೆಯಿಂದ ಶಾರೀರಿಕ ಸದೃಢತೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಭಾವನಾತ್ಮಕ ವಿಚಾರಗಳು ಬೆಳೆಯುತ್ತವೆ. ಅಂದಾಗಲೇ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಸಾಧ್ಯ. ಅದನ್ನು ಹೊರಹಾಕುವ ಕೆಲಸಗಳಿಗೆ ಇಂಥ ವೇದಿಕೆಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಬಾಲ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವುದು ಚಿಗುರು ಕಾರ್ಯಕ್ರಮದ ಉದ್ದೇಶ. ದೇಸಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಸತಿ ಶಾಲೆ ಪ್ರಾಚಾರ್ಯ ಶಕುಂತಲಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಚಿಟಗುಪ್ಪ ಠಾಣೆ ಎಎಸ್ಐ ಆಕಾಶರಡ್ಡಿ, ಬಿವಿಬಿ ಕಾಲೇಜಿನ ಉಪನ್ಯಾಸಕಿ ರೇಣುಕಾ ಮಳ್ಳಿ, ದೇವಿದಾಸ ಜೋಶಿ ಇತರರಿದ್ದರು.
ದೀಪಿಕಾ ದಾನಿ ಮತ್ತು ತಂಡ ಶಾಸ್ತ್ರೀಯ ಸಂಗೀತ, ಶಿವಮಹಿಮಾ ಮನೋಹರ ತಂಡ ಸುಗಮ ಸಂಗೀತ, ಶ್ವೇತಾ ತಂಡ ಜಾನಪದ ಗೀತೆ, ಅರುಣಾ ತಂಡ ಸಮೂಹ ನೃತ್ಯ, ದೃಷ್ಟಿ ತಂಡ ಏಕಪಾತ್ರಾಭಿನಯ, ವಿದ್ವಾನ ಮತ್ತು ತಂಡ ನಾಟಕ ಪ್ರದರ್ಶನ ಮಾಡಿ ಜನಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net