

ಬೀದರ್: ನಿವೃತ್ತಿ ವೇತನ ನೀಡಿಕೆಯಲ್ಲಿ ಆಗುತ್ತಿರುವ ಅನ್ಯಾಯ, ತಾರತಮ್ಯ ಸರಿಪಡಿಸುವಂತೆ ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ(ಡಿಸಿಸಿ) ಬ್ಯಾಂಕ್ ನಿವೃತ್ತ ನೌಕರರ ಸಂಘ ಒತ್ತಾಯಿಸಿದೆ.
ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಅಮರ ಖಂಡ್ರೆ ಅವರಿಗೆ ಸಂಘದಿಂದ ಈ ಸಂಬಂಧ ಪತ್ರ ಬರೆದಿದ್ದು, 2010ಕ್ಕಿಂತ ಮುಂಚೆ ಹಾಗೂ 2010ರ ನಂತರ ಬ್ಯಾಂಕ್ನಿಂದ ನಿವೃತ್ತರಾದವರಿಗೆ ನಿವೃತ್ತಿ ವೇತನ ಕೊಡುವಲ್ಲಿ ಮಾಡುತ್ತಿರುವ ತಾರತಮ್ಯ ಕೂಡಲೇ ನಿವಾರಿಸಿ ಎಲ್ಲರಿಗೂ ಸಮಾನ ವೇತನದ ಲಾಭ ಕಲ್ಪಿಸುವಂತೆ ಆಗ್ರಹಿಸಲಾಗಿದೆ.
ಡಿಸಿಸಿ ಬ್ಯಾಂಕ್ ನಲ್ಲಿ ಎರಡು ಬಗೆಯ ನಿವೃತ್ತಿ ವೇತನ ಕೊಡಲಾಗುತ್ತಿದೆ. ಇದರಿಂದ 2010 ಕ್ಕಿಂತ ಮುಂಚೆ ನಿವೃತ್ತರಾದವರಿಗೆ ಮಾಸಿಕ ಕೇವಲ 3 ಸಾವಿರ ರೂ.ನಿವೃತ್ತಿ ವೇತನ ಸಿಗುತ್ತಿದೆ. ಆದರೆ 2010ರ ನಂತರ ನಿವೃತ್ತರಾದವರಿಗೆ ಮಾಸಿಕವಾಗಿ ಮೂರು ಶ್ರೇಣಿಗಳಲ್ಲಿ ಮಾಸಿಕ 8, 10 ಹಾಗೂ 12 ಸಾವಿರ ರೂ. ನಿವೃತ್ತಿ ವೇತನ ಸಿಗುತ್ತಿದೆ. ಮುಂಚೆ ನಿವೃತ್ತರಾದ ನಮ್ಮ ವಯಸ್ಸು ಇದೀಗ 75ರ ಆಸುಪಾಸಿದೆ. ಇಂದಿನ ದುಬಾರಿ ದುನಿಯಾದಲ್ಲಿ ಮಾಸಿಕ 3 ಸಾವಿರ ರೂ.ಏತಕ್ಕೂ ಸಾಲುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ 13 ವರ್ಷದ ನಮ್ಮ ಬೇಡಿಕೆಗೆ ಸ್ಪಂದಿಸಬೇಕೆಂದು ಕೋರಲಾಗಿದೆ.
ಡಿಸಿಸಿ ಬ್ಯಾಂಕ್ ಪ್ರಗತಿಗೆ ಎಲ್ಲರ ಜತೆಗೂಡಿ ನಾವೂ ಕೆಲಸ ಮಾಡಿದ್ದೇವೆ. ಆದರೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದಂತೆ ಮಾಡುವುದು ಸರಿಯಲ್ಲ. ಮಂಗಳೂರು ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಎಲ್ಲ ನಿವೃತ್ತರಿಗೂ ಸರಿಸಮಾನ ನಿವೃತ್ತಿ ವೇತನ ನೀಡಲಾಗುತ್ತಿದೆೆ.ಇದೇ ಮಾದರಿ ಇಲ್ಲೂ ಅಳವಡಿಸಿ ನ್ಯಾಯ ಒದಗಿಸಬೇಕು. ಸಹಕಾರ ಬ್ಯಾಂಕ್‌ನ ನಿವೃತ್ತರ ಪಿಂಚಣಿ ನಿಧಿಯಲ್ಲಿ ಸಾಕಷ್ಟು ಹಣ ಜಮೆ ಇರುವುದರಿಂದ ಬ್ಯಾಂಕ್ ಗೆ ಹೆಚ್ಚುವರಿ ಆರ್ಥಿಕ ಹೊರೆಯೂ ಬೀಳುವುದಿಲ್ಲ ಎಂದು ಅಧ್ಯಕ್ಷರ ಗಮನ ಸೆಳೆಯಲಾಗಿದೆ.