ಬಸವ ದಳ ಸಮಾವೇಶದಲ್ಲಿ ಐದು ನಿರ್ಣಯ

Basava Dal Samavesh - Copy
Published on

ಬೀದರ್: ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಸಮಾವೇಶದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮರು ಪ್ರಸ್ತಾವ ಕಳುಹಿಸಬೇಕು ಎನ್ನುವುದು ಸೇರಿದಂತೆ ಐದು ನಿರ್ಣಯ ಕೈಗೊಳ್ಳಲಾಯಿತು.
ಸಾನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡುವ ಪ್ರಸ್ತಾವ ಇಟ್ಟರು. ಅದಕ್ಕೆ ಸಮಾವೇಶ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿತು.
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಪ್ರಸ್ತಾವವನ್ನು ಮರು ಪರಿಶೀಲಿಸಬೇಕೆಂದು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿರುವ ಕಾರಣ, ಅದಕ್ಕೆ ಸೂಕ್ತ ಉತ್ತರ ನೀಡಿ, ಕೇಂದ್ರಕ್ಕೆ ಮರು ಪ್ರಸ್ತಾವ ಕಳುಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿತು.
ವಿಶ್ವದ ಮೊದಲ ಸಂಸತ್ ಎಂದೇ ಕರೆಯಲಾಗುವ ಬಸವಕಲ್ಯಾಣದ ಅನುಭವ ಮಂಟಪದ ರೂವಾರಿ, ಮಹಾ ಮಾನವತಾದಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರನ್ನಾಗಿ ಘೋಷಿಸಬೇಕು. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡಬೇಕು. ಬಸವಕಲ್ಯಾಣ ಸೇರಿ ಶರಣರ ಸ್ಥಳಗಳು ಒಳಗೊಂಡ ಕಾರಿಡಾರ್ ರಚಿಸಿ, ಅಭಿವೃದ್ಧಿಪಡಿಸಬೇಕು ಹಾಗೂ ಕೇಂದ್ರ ಸರ್ಕಾರ ದೇಶದಾದ್ಯಂತ ಬಸವ ಜಯಂತಿ ಆಚರಣೆಗೆ ಆದೇಶ ಹೊರಡಿಸಬೇಕು ಎನ್ನುವ ಬೇಡಿಕೆಗಳು ಸಮಾವೇಶದ ಇತರ ನಾಲ್ಕು ನಿರ್ಣಯಗಳು.
ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ರಾಷ್ಟ್ರೀಯ ಬಸವ ದಳ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಯಬೇಕು. ಬಸವ ತತ್ವವನ್ನು ಮನೆ, ಮನಕ್ಕೆ ಮುಟ್ಟಿಸಬೇಕು ಎಂದು ಮಾತೆ ಡಾ. ಗಂಗಾದೇವಿ ಬಸವ ದಳ ಪದಾಧಿಕಾರಿಗಳಿಗೆ ಸಲಹೆ ಮಾಡಿದರು.
ಬಸವ ದಳ ಬಸವ ಧರ್ಮಕ್ಕೆ ರಕ್ಷಾ ಕವಚದಂತಿದೆ. ಬಸವ ತತ್ವ ಪ್ರಚಾರ ಕಾರ್ಯಕ್ಕೆ ಎಲ್ಲ ಬಸವ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ರಾಷ್ಟ್ರೀಯ ಬಸವ ದಳ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದು, ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ ಎಂದು ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.
ಪುನಃಶ್ಚೇತನಗೊಳಿಸಲಾದ ಬಸವ ದಳದ 100 ಘಟಕಗಳ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನರಸಪ್ಪ ಲಕ್ಷ್ಮಣ ಮಾಳೆಗಾಂವ್ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಶಿವಕುಮಾರ ಪಾಂಚಾಳ ವಚನ ಸಂಗೀತ ನಡೆಸಿಕೊಟ್ಟರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವಕುಮಾರ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಕ್ಕ ಅನ್ನಪೂರ್ಣ ತಾಯಿ, ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು.
ಜಿ.ಕೆ. ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರ ಬಸವ ಪೂಜೆ ನೆರವೇರಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸವ ಬಳತೆ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಬಸವ ದಳದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬಸವ ದಳದ ರಾಜ್ಯ ಘಟಕದ ಅಧ್ಯಕ್ಷ ಚನ್ನಬಸವ ಬಿಜಲಿ, ಲಿಂಗಾಯತ ಸಮನ್ವಯ ಸಮಿತಿಯ ರಾಷ್ಟ್ರೀಯ ಸಂಯೋಜಕ ಅವಿನಾಶ ಭೋಸಿಕರ್, ಬಸವ ದಳ ತೆಲಂಗಾಣ ಘಟಕದ ಅಧ್ಯಕ್ಷ ಶಂಕರೆಪ್ಪ ಪಾಟೀಲ ಜಹೀರಾಬಾದ್, ಮಹಾರಾಷ್ಟ್ರ ಘಟಕದ ಅಧ್ಯಕ್ಷ ಪ್ರಮೋದ್ ಪರೀಟ್, ಆಂಧ್ರಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ನೀಲಕಂಠೇಶ್ವರ ಪ್ರಸಾದ್ ಬಾಪಟ್ಲಾ, ಪ್ರಮುಖರಾದ ಶಿವಶರಣಪ್ಪ ವಾಲಿ, ಅನಿಲಕುಮಾರ ಪಾಟೀಲ, ಬಾಬುವಾಲಿ, ಕುಶಾಲರಾವ್ ಪಾಟೀಲ ಖಾಜಾಪುರ, ಶರಣಪ್ಪ ಮಿಠಾರೆ, ಪ್ರಭುರಾವ್ ವಸ್ಮತೆ, ಬಿ.ಜಿ. ಶೆಟಕಾರ್, ವಿಜಯಕುಮಾರ ಪಟ್ನೆ, ಮಾತೆ ಶಾರದಮ್ಮ, ಶಕುಂತಲಾ ಬೆಲ್ದಾಳೆ, ವಿಜಯಕುಮಾರ ಪಾಟೀಲ ಖಾಜಾಪುರ, ಸುರೇಶ ಚನಶೆಟ್ಟಿ, ಚಂದ್ರಶೇಖರ ಹೆಬ್ಬಾಳೆ, ಜೈರಾಜ ಖಂಡ್ರೆ ಮೊದಲಾದವರು ಇದ್ದರು.
ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ಗಣೇಶ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net