ಅಂಚೆ ಇಲಾಖೆಯಿಂದ ಜನಸ್ನೇಹಿ ಸೇವೆ

Post Office Programme Photo
Published on

ಬೀದರ್: ಭಾರತೀಯ ಅಂಚೆ ಇಲಾಖೆಯು ಜನ ಸ್ನೇಹಿ ಸೇವೆ ನೀಡುತ್ತಿದೆ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ವೀರಭದ್ರೇಶ್ವರ ಸ್ವಾಮಿ ನುಡಿದರು.
ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಆಯೋಜಿಸಿದ್ದ ವಿಚಕ್ಷಣ ಜಾಗೃತಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಚೆ ಇಲಾಖೆ ಇಂದಿಗೂ ವಿಶ್ವಾಸಾರ್ಹತೆ ಕಾಯ್ದುಕೊಂಡು ಬಂದಿದೆ. ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಲು ಇಲ್ಲವೇ ವರ್ಗಾವಣೆಗೆ ಯಾವುದೇ ರೀತಿಯ ಲಂಚ ಅಥವಾ ಶಿಫಾರಸಿಗೆ ಅವಕಾಶ ಇಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಇಲಾಖೆ ಸಿಬ್ಬಂದಿ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇಲಾಖೆಗೆ ಗೌರವ ತರುವಂಥ ಕೆಲಸ ಮಾಡಬೇಕು ಎಂದು ಹೇಳಿದರು.
ಬೀದರ್ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್ ಮಾತನಾಡಿ, ಇಲಾಖೆ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಯಾವ ರೀತಿಯ ಜಾಗರೂಕತೆ ವಹಿಸಬೇಕು ಎನ್ನುವ ಕುರಿತು ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಚಕ್ಷಣ ಜಾಗೃತಿ ಸಪ್ತಾಹ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಮನುಷ್ಯನಿಗೆ ಹಣಕ್ಕಿಂತ ಆತ್ಮ ತೃಪ್ತಿ ಮುಖ್ಯ. ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ, ಸಂಬಳಕ್ಕೆ ನ್ಯಾಯ ಒದಗಿಸಬೇಕು. ನಾಲ್ಕು ಜನರಿಗೆ ಸಹಾಯ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂಚೆ ಇಲಾಖೆ ಸಿಬ್ಬಂದಿ ಇದರ ಸದುಪಯೋಗ ಪಡೆಯಬೇಕು. ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕೃಷಿ ಅಧಿಕಾರಿ ಆರತಿ ಪಾಟೀಲ ಮಾತನಾಡಿ, ಸರ್ಕಾರಿ ಕೆಲಸ ಸಿಗುವುದು ಕಷ್ಟ. ಅಂಚೆ ಇಲಾಖೆ ಸಿಬ್ಬಂದಿ ಕರ್ತವ್ಯ ನಿಷ್ಠೆಗೆ ಇನ್ನೊಂದು ಹೆಸರಾಗಿದ್ದಾರೆ. ಪ್ರಾಮಾಣಿಕ ಕೆಲಸಕ್ಕೆ ಖಂಡಿತವೂ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.
ಸಪ್ತಾಹ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ‘ಲಂಚಕ್ಕೆ ಇಲ್ಲ ಎನ್ನೋಣ, ದೇಶಕ್ಕೆ ಬದ್ಧರಾಗಿ ಇರೋಣ’ ಕುರಿತು ಚರ್ಚಾ ಸ್ಪರ್ಧಾ ಏರ್ಪಡಿಸಲಾಗಿತ್ತು ಎಂದು ಹೇಳಿದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪ ಅಂಚೆ ಅಧೀಕ್ಷಕ ಅಕ್ಷಯ್ ಕಾಮತ್, ಬೀದರ್ ಅಂಚೆ ಕಚೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net