ಗಾನಸುಧೆಯಲ್ಲಿ ಮಿಂದೆದ್ದ ಬೀದರಿಗರು

BIDARI SANGEETOTSAVA -2
Published on

ಬೀದರ್: ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬಿದರಿ ಸಂಗೀತೋತ್ಸವದಲ್ಲಿ ಬೀದರಿಗರು ಗಾನಸುಧೆಯಲ್ಲಿ ಮಿಂದೆದ್ದರು.

ಖ್ಯಾತ ಕಲಾವಿದರ ಕಂಠಸಿರಿಯಲ್ಲಿ ಮೂಡಿ ಬಂದ ಕನ್ನಡ ಗೀತೆಗಳಿಗೆ ತಲೆದೂಗಿದರು. ‘ವಾಹ್’ ಎಂದು ಉದ್ಗರಿಸಿ, ಕರತಾಡನ ಮಾಡಿದರು. ಬೀದರ್‍ನ ಗಾಯಕಿ ರೇಖಾ ಅಪ್ಪಾರಾವ್ ಸೌದಿ, ಮೈಸೂರಿನ ಸರಿಗಮಪ ಖ್ಯಾತಿಯ ಹರ್ಷಧ್ವನಿ ಶ್ರೀಹರ್ಷ, ಅಮಿತ್ ಜನವಾಡಕರ್, ರಾಜೇಶ ಕುಲಕರ್ಣಿ, ವಿಷ್ಣು ಜನವಾಡಕರ್, ಶ್ರೀನಾಥ ಕಮಲಾಪುರಕರ್ ಗಾನ ಲಹರಿ ಹರಿಸಿದರೆ, ಮೈಸೂರಿನ ನೀತು ನೀನಾದ್ ಕೊಳಲು, ವಿಲ್ಸನ್ ಗಿಟಾರ್, ಧ್ರುವರಾಜ್ ಪ್ಯಾಡ್, ಸಾಗರದ ಮೆಲ್ವಿನ್, ವಿಜಯಪುರದ ಶಿವಾನಂದ ಕೀ ಬೋರ್ಡ್, ಪಾರ್ಥಿವನ್ ಡ್ರಮ್ಸ್ ಡ್ರಮ್ ನುಡಿಸಿದರು. ಭದ್ರಾವತಿಯ ರಮೇಶ ತಬಲಾ ಸಾಥ್ ನೀಡಿದರು.

ಕುಚಿಕು ಕುಚಿಕು, ರಾ ರಾ ರಕ್ಕಮ್ಮ: ಬಿದರಿ ಉತ್ಸವದಲ್ಲಿ ನೀಲಾಂಬರಿ ಚಿತ್ರದ ‘ಇಂಚರವೆ', ಅವನೇ ನನ್ನ ಗಂಡ ಚಿತ್ರದ ‘ಹಸಿರು ಗಾಜಿನ ಬಳೆಗಳೆ, ವಿಕ್ರಾಂತ ರೋಣ ‘ರಾ ರಾ ರಕ್ಕಮ್ಮ’ ಮೊದಲಾದ ಗೀತೆಗಳು ಪ್ರೇಕ್ಷಕರ ಮನ ಗೆದ್ದವು.

ಗಾಯಕಿ ರೇಖಾ ಅಪ್ಪಾರಾವ್ ಸೌದಿ ಅವರು ‘ಇಂಚರವೆ', ‘ಹಸಿರು ಗಾಜಿನ ಬಳೆಗಳೆ' ‘ಯೆಂಡ ಯೆಂಡ್ತಿ ಕನ್ನಡ ಪದಗೊಳ್', ‘ಕಂಡೆ ಕಂಡೆ ಪರಶಿವನ', ಎಲ್ಲಿ ಕಾಣೆ ಗೀತೆಗಳನ್ನು ಸುಮಧುರವಾಗಿ ಹಾಡಿ ಸಂಗೀತಾಸಕ್ತರನ್ನು ಪುಳಕಿತಗೊಳಿಸಿದರು.

ಹರ್ಷಧ್ವನಿ ಶ್ರೀಹರ್ಷ, ಅಮಿತ್, ವಿಷ್ಣು ಹಾಗೂ ರಾಜೇಶ ಕುಲಕರ್ಣಿ ಜೊತೆಗಿನ ಅವರ ಪ್ರೇಮಲೋಕದ ‘ಇದು ನನ್ನ ನಿನ್ನ ಪ್ರೇಮಗೀತೆ', ‘ನೋಡಮ್ಮ ಹುಡುಗಿ', ಕಾಂತಾರದ ‘ಸಿಂಗಾರ ಸಿರಿಯೇ', ಅಮಿತ್ ಹಾಗೂ ವಿಷ್ಣು ಜತೆಗಿನ ‘ರಾ ರಾ ರಕ್ಕಮ್ಮ' ಡ್ಯುಯಟ್ ಗೀತೆಗಳು ಸಂಗೀತದ ರಸದೌತಣ ನೀಡಿದವು.

ಹರ್ಷಧ್ವನಿ ಶ್ರೀಹರ್ಷ ಅವರ ‘ತರವಲ್ಲ ತಗಿ ನಿನ್ನ', ‘ಯಾರೇ ನೀನು', ‘ಸಂತೋಷಕ್ಕೆ' ಸೇರಿದಂತೆ ‘ಟಪ್ಪಾಂಗುಚಿ ಮೆಡ್ಲಿ', ‘ರೋರಿಂಗ್ ರಾಮಾ', ‘ತಾಳಿ ಕಟ್ಟುವ ಶುಭ ವೇಳೆ', ಶ್ರೀನಾಥ ಕಮಲಾಪುರಕರ್ ಅವರ ಮಹಾಕ್ಷತ್ರೀಯದ ‘ಈ ಭೂಮಿ ಬಣ್ಣದ ಬಗುರಿ', ‘ಇದೇ ನಾಡು ಇದೇ ಭಾಷೆ' ಹಾಗೂ ರಾಜೇಶ ಕುಲಕರ್ಣಿ ಅವರ ಚಲಿಸುವ ಮೋಡದ ‘ಜೇನಿನ' ಹೊಳೆಯೋ' ಹಾಡುಗಳು, ಹಾಗೆಯೇ ನಾಗಚಂದ್ರಿಕಾ ಭಟ್ ಅವರ ಶಿಶುನಾಳ ಶರೀಫರ ಗೀತೆ ಮತ್ತು ಭಾರತ ಭೂಷಿರ ಗೀತೆ ಪ್ರೇಕ್ಷಕರ ಮನರಂಜಿಸಿದವು.

ಬಿದರಿ ವೇದಿಕೆ ಮತ್ತಷ್ಟು ಬೆಳೆಯಲಿ: ಬಿದರಿ ಸಾಂಸ್ಕøತಿಕ ವೇದಿಕೆ ಆಯೋಜಿಸಿರುವ ಬಿದರಿ ಉತ್ಸವ ಅತ್ಯುತ್ತಮವಾಗಿ ನಡೆದಿದ್ದು ಇದು ಮತ್ತಷ್ಟು ಬೆಳೆಯಲಿ, ಬೀದರ್‍ನವರು ಯಾರಿಗಿಂತಲೂ ಕಮ್ಮಿ ಇಲ್ಲ ಎಂಬುವುದು ಇಂಥ ಕಾರ್ಯಕ್ರಮಗಳಿಂದ ಸ್ಪಷ್ಟವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net