

ಬೀದರ್: ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ನವೆಂಬರ್ 2 ರಂದು ಸಾವಿರ ಮೀಟರ್ ಕನ್ನಡ ಬಾವುಟದ ಯಾತ್ರೆ ನಡೆಯಲಿದೆ.
ಬೆಳಿಗ್ಗೆ 8.15ಕ್ಕೆ ಬಿ.ವಿ.ಬಿ. ಕಾಲೇಜು ಸಮೀಪದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಯಾತ್ರೆಗೆ ಚಾಲನೆ ನೀಡುವರು. ಯಾತ್ರೆ ಅಲ್ಲಿಂದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.
ಯಾತ್ರೆಯಲ್ಲಿ ತಾಯಿ ಭುವನೇಶ್ವರಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳು ಇರಲಿವೆ. ವಿವಿಧ ಕಲಾ ತಂಡಗಳು ಗಮನ ಸೆಳೆಯಲಿವೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 11.30ಕ್ಕೆ ರಂಗ ಮಂದಿರದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು.
ಹವಾ ಮಲ್ಲಿನಾಥ ಮಹಾರಾಜರು ಸಾನಿಧ್ಯ, ಹುಲಸೂರಿನ ಶಿವಾನಂದ ಸ್ವಾಮೀಜಿ, ಮಾತೆ ಜಗದೀಶ್ವರಿ, ಮಾತೆ ಸತ್ಯದೇವಿ, ಪ್ರಭುದೇವರು ಸಮ್ಮುಖ ವಹಿಸುವರು.
ಸಚಿವ ರಹೀಂಖಾನ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ಗಣ್ಯರು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರನಟ ನಿಂಗರಾಜ ಸಿಂಗಡಿ ಅವರಿಗೆ ಕನ್ನಡ ಸಾರಥಿ ಪ್ರಶಸ್ತಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಶಾಲಾ, ಕಾಲೇಜುಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಉಪನ್ಯಾಸ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಕನ್ನಡಾಭಿಮಾನಿಗಳು ಬಾವುಟದ ಯಾತ್ರೆ ಹಾಗೂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಾವಿರ ಬಾವುಟ ಉಚಿತ ವಿತರಣೆ
ಕನ್ನಡ ನಾಡು, ನುಡಿಯ ಅಭಿಮಾನ ಬೆಳೆಸುವ ಭಾಗವಾಗಿ ನಗರದಲ್ಲಿ ಮಂಗಳವಾರ ಸಾರ್ವಜನಿಕರಿಗೆ ಒಂದು ಸಾವಿರ ಬಾವುಟಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಹಣ್ಮು ಪಾಜಿ ತಿಳಿಸಿದ್ದಾರೆ.