ಅಂತರಂಗ ಶುದ್ಧಿಗೆ ಭಗವಂತನ ಕೃಪೆ

Khatak Chincholi
Published on

ಬೀದರ್: ಅಂತರಂಗ ಶುದ್ಧವಿದ್ದವರಿಗೆ ಭಗವಂತನ ಕೃಪೆಯಾಗುತ್ತದೆ ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ನವರಾತ್ರಿ ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಬಹಿರಂಗ ಶುದ್ಧವಿದ್ದರಷ್ಟೇ ಸಾಲದು. ಅಂತರಂಗ ಶುದ್ಧಿಯೂ ಬಹಳ ಅವಶ್ಯಕ ಎಂದು ನುಡಿದರು.
ಬಸವಾದಿ ಶರಣರು ಅಂತರಂಗ ಶುದ್ಧಿಯ ಮಹತ್ವವನ್ನು ತಮ್ಮ ವಚನಗಳಲ್ಲಿ ಮನವರಿಕೆ ಮಾಡಿದ್ದಾರೆ ಎಂದು ತಿಳಿಸಿದರು.
ನವರಾತ್ರಿ ಸಂದರ್ಭದಲ್ಲಿ ಹೇಗೆ ಮನೆ ಹಾಗೂ ಬಟ್ಟೆಗಳನ್ನು ಸ್ವಚ್ಛಗೊಳಿಸಲಾಗುತ್ತದೆಯೋ, ಹಾಗೆಯೇ ಮನಸ್ಸಿನ ಶುದ್ಧೀಕರಣವೂ ಆಗಬೇಕು. ದುಷ್ಟ ಗುಣಗಳು, ಕೆಟ್ಟ ಆಲೋಚನೆಗಳನ್ನು ಹೊರ ಹಾಕಿ, ಸದ್ವಿಚಾರಗಳನ್ನು ತುಂಬಬೇಕು ಎಂದು ಹೇಳಿದರು.
ಹಿಂದೆ ದೇವಿ ರಾಕ್ಷರಸನ್ನು ಸಂಹಾರ ಮಾಡಿದ್ದರು. ಕೆಟ್ಟ ಗುಣವೇ ರಾಕ್ಷಸ. ಹೀಗಾಗಿ ನಾವು ಕೆಟ್ಟ ಗುಣಗಳನ್ನು ತೊಲಗಿಸಬೇಕು. ಅಸತ್ಯ, ಮೋಸ, ವಂಚನೆ, ಸುಲಿಗೆ ಸೇರಿದಂತೆ ಕೆಟ್ಟ ಗುಣಗಳನ್ನು ಬಿಟ್ಟರೆ ಮನುಷ್ಯ ಮಹಾದೇವನಾಗುತ್ತಾನೆ ಎಂದು ತಿಳಿಸಿದರು.
ನಂಬಿಕೆ ಇಟ್ಟರೆ ಖಂಡಿತ ದೇವರು ನಮ್ಮನ್ನು ಕಾಯುತ್ತಾನೆ. ನಿತ್ಯ ದೇವರ ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು. ರೇವಣಸಿದ್ದ ಶಾಸ್ತ್ರಿ, ಬಸವಲಿಂಗ ದೇವರು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net