

ಬೀದರ್: ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಮನೆ ಮನೆಗೆ ನಲ್ಲಿ ನೀರು ಪೂರೈಸುವ ಜಲ ಜೀವನ ಮಿಷನ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೈಗೊಂಡಿದ್ದು, ಕೂಡಲೇ ತನಿಖೆ ನಡೆಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಮುಧೋಳ ಒತ್ತಾಯಿಸಿದ್ದಾರೆ.
ನಗರದಲ್ಲಿ ಅವರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಅವರನ್ನು ಭೇಟಿ ಮಾಡಿ, ಈ ಕುರಿತು ದೂರು ಸಲ್ಲಿಸಿದರು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೈಗೊಳ್ಳುತ್ತಿರುವ ಕಾಮಗಾರಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಮನ ಬಂದಂತೆ ರಸ್ತೆ ಅಗೆದು, ಅದನ್ನು ಅರ್ಧಕ್ಕೆ ಬಿಟ್ಟು ಮತ್ತೆ ಬೇರೆಡೆ ರಸ್ತೆ ಅಗೆಯಲಾಗುತ್ತಿದೆ. ಇದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಗುಂಡಿ ತೋಡಿ, ಪೈಪ್ ಅಳವಡಿಸುವ ವೇಳೆ ಈಗಾಗಲೇ ನೀರು ಪೂರೈಕೆ ಮಾಡಲಾಗುತ್ತಿರುವ ಪೈಪ್‍ಗಳು ಹಾಗೂ ವಾಲ್‍ಗಳಿಗೆ ಹಾನಿಯಾಗುತ್ತಿದೆ. ನೀರು ಕಲುಷಿತಗೊಳ್ಳುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಗಮನ ಸೆಳೆದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಾಮಗಾರಿ ಕುರಿತು ತನಿಖೆ ನಡೆಸಬೇಕು. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರಿಗೆ ಬಿಲ್ ಪಾವತಿಸಬಾರದು. ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಕಾನೂನು ಚೌಕಟ್ಟಿನಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.