ಕಲ್ಯಾಣ ಪರ್ವಕ್ಕೆ ಭರದ ಸಿದ್ಧತೆ

Sanju Patil Goudgaon
Published on

ಬೀದರ್: ಬಸವಕಲ್ಯಾಣದಲ್ಲಿ ಅಕ್ಟೋಬರ್ 28 ರಿಂದ 30 ರ ವರೆಗೆ ನಡೆಯಲಿರುವ ಕಲ್ಯಾಣ ಪರ್ವಕ್ಕೆ ಭರದ ಸಿದ್ಧತೆಗಳು ನಡೆದಿವೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿಯ ಅಧ್ಯಕ್ಷ ಸಂಜು ಪಾಟೀಲ ಗೌಡಗಾಂವ್ ತಿಳಿಸಿದ್ದಾರೆ.
ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತರು ವೇದಿಕೆ, ಮಂಟಪ, ವಸತಿ, ಆಹಾರ, ಕುಡಿಯುವ ನೀರು ಸೇರಿದಂತೆ ವಿವಿಧ ಸಿದ್ಧತೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈವರೆಗೆ 21 ಕಲ್ಯಾಣ ಪರ್ವಗಳು ಯಶಸ್ವಿಯಾಗಿ ನಡೆದಿವೆ. 22ನೇ ಕಲ್ಯಾಣ ಪರ್ವವೂ ಅದ್ಧೂರಿಯಾಗಿ ನೆರವೇರಲಿದೆ. ಬಸವ ಧರ್ಮ ಪೀಠದ ಕಲ್ಯಾಣ ಪರ್ವವೇ ಅಧಿಕೃತ ಕಾರ್ಯಕ್ರಮವಾಗಿದೆ. ಈ ಬಗ್ಗೆ ಭಕ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.
ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರ ನೇತೃತ್ವದಲ್ಲಿ ಬಸವ ಮಹಾಮನೆ ಆವರಣದಲ್ಲಿ ಮೂರು ದಿನ ವಿವಿಧ ಗೋಷ್ಠಿಗಳು ಜರುಗಲಿವೆ. ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರು ವಚನ ಸಂಗೀತ, ರೂಪಕ ನಡೆಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ.
ಕೊನೆಯ ದಿನ ಕೋಟೆಯಿಂದ ಬಸವ ಮಹಾಮನೆ ಆವರಣದ ವರೆಗೆ ಆನೆ ಮೇಲೆ ವಚನ ಸಾಹಿತ್ಯದ ಮೆರವಣಿಗೆ ಜರುಗಲಿದೆ. ಸೋಲಾಪುರದ ಝಾಂಜ್ ಮೇಳ, ಕೋಲಾಟ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಕುದುರೆಗಳ ಮೇಲೆ ಶರಣರ ಪಾತ್ರಧಾರಿಗಳು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಪರ್ವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಜನ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net