

ಬೀದರ್: ಅಂಚೆ ಇಲಾಖೆ ಹೊರ ತಂದಿರುವ ರಾಜಗೊಂಡ ಮಸಾಲೆ ವಿಶೇಷ ಅಂಚೆ ಲಕೋಟೆಯನ್ನು ಇಲಾಖೆಯ ಧಾರವಾಡ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಸುಶೀಲಕುಮಾರ ಇಲ್ಲಿಯ ಹಬ್ಸಿಕೋಟ್ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ರಾಜಗೊಂಡ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ದಿಸೆಯಲ್ಲಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯಗಳು ಪ್ರಶಂಸನೀಯವಾಗಿವೆ ಎಂದು ಅವರು ಹೇಳಿದರು.
sಸಿಬ್ಬಂದಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಲಾಖೆಯನ್ನು ಗ್ರಾಹಕರ ಬಳಿಗೆ ಒಯ್ಯಬೇಕು ಎಂದು ಸಲಹೆ ಮಾಡಿದರು.
ತಹಶೀಲ್ದಾರ್ ಡಿ.ಜಿ. ಮಹಾತ್ ಮಾತನಾಡಿ, ನಿಷ್ಠೆ ಇದ್ದರೆ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ
ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಬೀದರ್ ತಾಲ್ಲೂಕು ಸಹಾಯಕ ನಿರ್ದೇಶಕ ಸುಭಾಷ್ ನಾಗೂರೆ ಮಾತನಾಡಿ, ಅಂಚೆ ಇಲಾಖೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಜಗದೀಶ್ ಮಾತನಾಡಿ, ಅಂಚೆ ಇಲಾಖೆ ಕೋವಿಡ್ ವೇಳೆ ಜನರ ಬಳಿಗೆ ಹೋಗಿ ಸೇವೆ ಸಲ್ಲಿಸಿದೆ. ಸಾರ್ವಜನಿಕರು ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಚೆ ಅಧೀಕ್ಷಕ ಶ್ರೀಕರ ಬಾಬು ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ಅಂಚೆ ಇಲಾಖೆಯ ಆದ್ಯತೆಯಾಗಿದೆ ಎಂದು ಹೇಳಿದರು.
ಇಲಾಖೆಯ ಶಾಖೆಗಳಲ್ಲಿ ಅತಿ ಹೆಚ್ಚು ಉಳಿತಾಯ ಖಾತೆ ತೆರೆದ ರೋಹಿದಾಸ್, ಮಲ್ಲಿಕಾರ್ಜುನ, ರಾಜೇಶ, ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್, ಫಿಬಾರಾಣಿ, ಸುಭಾಷ್ ದೊಡ್ಡಿ ಹಾಗೂ ಮಾರುತಿ ಬಿ. ಅವರನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.
ಉಪ ಅಂಚೆ ಅಧೀಕ್ಷಕರಾದ ಅಕ್ಷಯ್ ಕಾಮತ್, ಶ್ರೀಧರ ಹಂದಿಗೊಳ, ಬೀದರ್ ಅಂಚೆ ವಿಭಾಗದ ಸಿಬ್ಬಂದಿ ಇದ್ದರು.
ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್ ಸ್ವಾಗತಿಸಿದರು. ಗೌಸಿಯಾ ಹಾಗೂ ಗಾಯತ್ರಿ ನಿರೂಪಿಸಿದರು. ಕಲ್ಲಪ್ಪ ಕೋಣಿ ವಂದಿಸಿದರು.