

ಬೀದರ್: ಜಿಲ್ಲಾ ಕೇಂದ್ರ ಬೀದರ್ನಲ್ಲಿ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.
ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದ ಪ್ರಮುಖರು, ಬಹಳ ವರ್ಷದಿಂದ ಸಂಬಂಧಿತ ಅಧಿಕಾರಿಗಳಿಂದ ಭವನ ನಿರ್ಮಾಣ ಕಾರ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೇವಲ ಕಡತಗಳಲ್ಲಿ ಉಳಿದಿದೆ. ಕಾಮಗಾರಿ ಪ್ರಾರಂಭಿಸಲು ತಕ್ಷಣ ನಿರ್ದೇಶನ ನೀಡಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಕೋರಿದ್ದಾರೆ.
ಜಿಲ್ಲೆಯಲ್ಲಿ 1.50 ಲಕ್ಷಕ್ಕೂ ಅಕ ಜನಸಂಖ್ಯೆ ಹೊಂದಿರುವ ಕೋಳಿ ಸಮುದಾಯದ ಆರಾಧ್ಯಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸಮುದಾಯ ಭವನ ನಗರದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರದಿಂದ 2010-11ರಲ್ಲಿ 1 ಕೋಟಿ ರೂ. ಮಂಜೂರಾಗಿತ್ತು. 2011ರ ಮಾ.22ರಂದು ಮೊದಲ ಕಂತು 25 ಲಕ್ಷ ರೂ. ಬಿಡುಗಡೆಯಾಗಿದೆ. ಆದರೆ ಆ ಸಂದರ್ಭದಲ್ಲಿ ಜಿಲ್ಲಾಡಳಿತ ಭವನಕ್ಕೆ ಭೂಮಿ ಮಂಜೂರು ಮಾಡಿರಲಿಲ್ಲ ಎಂದು ಗಮನ ಸೆಳೆದಿದ್ದಾರೆ.
2018ರಲ್ಲಿ ಭವನ ನಿರ್ಮಾಣಕ್ಕೆ ಚಿಕ್ಕಪೇಟ್ ಸಮೀಪ 20 ಗುಂಟೆ ಭೂಮಿ ಜಿಲ್ಲಾಡಳಿತ ಮಂಜೂರು ಮಾಡಿತ್ತು. ನಂತರ ಸಂಬಂಧಿತ ಅಧಿಕಾರಿಗಳೊಂದಿಗೆ ಭವನದ ಕಟ್ಟಡ ಪ್ರಾರಂಭಿಸುವ ಕುರಿತು ಚರ್ಚಿಸಿದರೆ, ಮೊದಲ ಕಂತಿನಲ್ಲಿ ಬಿಡುಗಡೆಯಾದ ಹಣ ಸರ್ಕಾರದ ಬೇರೆ ಕೆಲಸಕ್ಕೆ ಬಳಸಲಾಗಿದೆ ಎಂದು ಹಾರೈಕೆ ಉತ್ತರ ನೀಡುತ್ತಿದ್ದಾರೆ. ಈಗ ಭವನ ನಿರ್ಮಾಣಕ್ಕೆ ಭೂಮಿ ಮಂಜೂರಾಗಿದೆ. ಅನುದಾನ ಇಲ್ಲದ ಕಾರಣ ಕೆಲಸ ಆರಂಭವಾಗಿಲ್ಲ. ಸರ್ಕಾರ ತುರ್ತಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಅ.28ರಂದು ನಡೆಯಲಿರುವ ವಾಲ್ಮೀಕಿ ಜಯಂತ್ಯುತ್ಸವಕ್ಕೂ ಮುನ್ನ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾ ಸಂಚಾಲಕ ಸುನೀಲ ಭಾವಿಕಟ್ಟಿ, ಉಪಾಧ್ಯಕ್ಷ ಸುನೀಲ ಖಾಶೆಂಪುರ, ಮುಖಂಡರಾದ ಷನ್ಮುಖಪ್ಪ ಶೇಖಾಪುರ, ನಾಗಭೂಷಣ ಸಂಗಮ, ಸಂಜೀವಕುಮಾರ ಸಿರ್ಸಿ, ಅಶೋಕ ಕಾಗೆ, ಅರವಿಂದ ಜಮಾದಾರ, ಚಂದ್ರಕಾಂತ ಹಳ್ಳಿಖೇಡಕರ್, ಮಂಜುನಾಥ ಜಮಾದಾರ ಇತರರಿದ್ದರು.