

ಬೀದರ್: ಜಲಜೀವನ ಮಿಷನ್ (ಜೆಜೆಎಂ) ಕುರಿತು ಜಿಲ್ಲೆ ಜನರಲ್ಲಿರುವ ಗೊಂದಲಗಳನ್ನು ನಿವಾರಿಸುವ ಮೂಲಕ ಅಧಿಕಾರಿಗಳು ಗುಣಮಟ್ಟದ ಕೆಲಸ ಮಾಡಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಕೆಲವೆಡೆ ಜೆಜೆಎಂ ಅಡಿ ರಸ್ತೆ ಅಗೆದು ಕಾಮಗಾರಿ ಪೂರ್ಣಗೊಂಡ ನಂತರ ಮತ್ತೆ ರಸ್ತೆ ನಿರ್ಮಿಸದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿ ಆದ ಕಡೆ ಮರು ರಸ್ತೆ ನಿರ್ಮಿಸಿ ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಔರಾದ್-ಕಮಲನಗರ ವ್ಯಾಪ್ತಿಯಲ್ಲಿ ನಿಮರ್ಿಸಲು ನಿರ್ಧರಿಸಿರುವ 500 ಮೆಗಾ ವ್ಯಾಟ್ ಸೋಲಾರ್ ಪಾಕ್೯ ನಿರ್ಮಾಣಕ್ಕಾಗಿ ಸ್ಥಳೀಯರಿಂದ 250 ಎಕರೆ ಜಮೀನಿನ ಒಪ್ಪಿಗೆ ಪತ್ರ ಪಡೆಯಲಾಗಿದೆ. ಆದರೆ ಈ ಯೋಜನೆ ಡಿಪಿಅರ್ ಸಲ್ಲಿಸಲು 1000 ಎಕರೆ ಜಮೀನಿನ ಅಗತ್ಯವಿದೆ. ಕೆಲವರು ಬಾಡಿಗೆ ಆಧಾರದಲ್ಲಿ ಜಮೀನು ನೀಡಲು ಒಪ್ಪುತ್ತಿಲ್ಲ ಎಂದು ಅಕಾರಿಗಳು ಸಚಿವರ ಗಮನಕ್ಕೆ ತಂದರು.
ಕಳೆದ ವರ್ಷ ನೆಟೆ ರೋಗದಿಂದ ಹಾನಿಯಾದ ಬೆಳೆಗಳ ಸರ್ವೇ ಮಾಡಿಸಿ ಡಾಟಾ ಎಂಟ್ರಿ ಮಾಡಲಾಗಿದೆ. ಈಗಾಗಲೇ ಇದರಿಂದ ನಷ್ಟ ಅನುಭವಿಸಿದ ಕೆಲ ರೈತರಿಗೆ ಹಣ ಪಾವತಿಸಲಾಗಿದೆ. ಉಳಿದವರಿಗೂ ಮುಂದಿನ ಹಂತಗಳಲ್ಲಿ ಹಣ ಪಾವತಿಸುವುದಾಗಿ ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇನ್ನುಳಿದ ರೈತರಿಗೆ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಅಪರ ಡಿಸಿ ಶಿವಕುಮಾರ ಶೀಲವಂತ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಡಿಡಿಪಿಐ ಸಲೀಂ ಪಾಶಾ, ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗೌತಮ ಅರಳಿ ಇತರರಿದ್ದರು.
ಎಕರೆಗೆ 30 ಸಾವಿರ ರೂ.
ಔರಾದ್-ಕಮಲನಗರ ತಾಲೂಕು ವ್ಯಾಪ್ತಿಯಲ್ಲಿ 500 ಮೆಗಾ ವ್ಯಾಟ್ ಸೋಲಾರ್ ಪಾಕ್೯ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿಗಾಗಿ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿ ಎಕರೆಗೆ 30 ಸಾವಿರ ರೂ. ನೀಡುವುದಾಗಿ ತಿಳಿಸಲಾಗಿದೆ. ಜಮೀನು ಬಾಡಿಗೆ ಬದಲು ಖರೀದಿಸಿ ಎಂದು ಹೆಚ್ಚಿನ ರೈತರು ಮನವಿ ಮಾಡುತ್ತಿದ್ದಾರೆ. ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಜನರೊಂದಿಗೆ ಸಮಾಲೋಚಿಸಿ ಮನವೊಲಿಸುವ ಕೆಲಸ ಮಾಡಲಾಗುವುದು ಎಂದು ಡಿಸಿ ಗೋವಿಂದರಡ್ಡಿ ತಿಳಿಸಿದರು