ವಿಚಾರಣಾಧೀನ ಕೈದಿಗಳ ಹೊಲಿಗೆ ತರಬೇತಿ ಸಮಾರೋಪ

Rotary Club Training - Copy
Published on

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಡಿಸಿಸಿ ಬ್ಯಾಂಕ್‍ನ ಶಾರದಾ ರುಡ್‍ಸೆಟಿ ಸಹಯೋಗದಲ್ಲಿ ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಕಟ್ಟೆ ಅವರು, ಸ್ವಾವಲಂಬಿ ಬದುಕಿಗೆ ನೆರವಾಗಲು ವಿಚಾರಣಾಧೀನ ಕೈದಿಗಳಿಗೆ ಹೊಲಿಗೆ ತರಬೇತಿ ನೀಡಿರುವುದು ಶ್ಲಾಘನೀಯವಾಗಿದೆ. ಕೌಶಲಗಳು ಬದುಕು ಕಟ್ಟಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.
ಕ್ಲಬ್ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಮಾತನಾಡಿ, 33 ಜನ ವಿಚಾರಣಾಧೀನ ಕೈದಿಗಳಿಗೆ ಕೈ ಚೀಲ, ಟಿಫಿನ್ ಬ್ಯಾಗ್, ವ್ಯಾನಿಟಿ ಬ್ಯಾಗ್, ಪರ್ಸ್, ದಾಖಲೆ ಸಂಗ್ರಹಿಸಿಡುವ ಬ್ಯಾಗ್ ತಯಾರಿಕೆ ಕುರಿತು 13 ದಿನಗಳ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ತರಬೇತಿ ಪಡೆದವರು ಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಆದಾಯ ವೃದ್ಧಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಮಾಣಿಕ ಪವಾರ್ ಅವರು, ರೋಟರಿ ಸಂಸ್ಥೆ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಕೈದಿಗಳಿಗೆ ಹೊಲಿಗೆ ತರಬೇತಿ ನೀಡಿದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯ ಅನುಕರಣೀಯ. ರೋಟರಿ ಜಿಲ್ಲೆ 3160 ಅಡಿಯ 17 ಜಿಲ್ಲೆಗಳಲ್ಲೂ ಈ ರೀತಿಯ ತರಬೇತಿ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕ ದತ್ತಾತ್ರೇಯ ಮೇದಾ, ಡಿಸಿಸಿ ಬ್ಯಾಂಕ್ ಶಾರದಾ ರುಡ್‍ಸೆಟಿ ನಿರ್ದೇಶಕ ಶಿವಪ್ರಸಾದ್ ಮಾತನಾಡಿದರು. ಕೈದಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರೋಟರಿ ಕಲ್ಯಾಣ ಝೋನ್ ಕಾರ್ಯದರ್ಶಿ ಸೂರ್ಯಕಾಂತ ರಾಮಶೆಟ್ಟಿ, ಶಿವಕುಮಾರ ಪಾಟೀಲ, ವಿಕ್ರಮ ತಗಾರೆ, ಸತೀಶ್ ಸ್ವಾಮಿ, ಮಹಮ್ಮದ್ ಫರ್ದಿನ್, ಗಜಾನನ ಪೋಕಲವಾರ್, ಡಾ. ರಿತೇಶ ಸುಲೆಗಾಂವ್, ಡಾ. ರಘು ಕೃಷ್ಣಮೂರ್ತಿ, ದತ್ತಾತ್ರೇಯ ಪಾಟೀಲ, ಭದ್ರಪ್ಪ ಮಿರಕಲೆ, ಡಾ. ಮಹಮ್ಮದ್ ಅಹಮ್ಮದ್, ಡಾ. ಶರಣಯ್ಯ ಸ್ವಾಮಿ, ಜಿಲ್ಲಾ ಪಂಚಾಯಿತಿಯ ಯೋಜನಾ ವ್ಯವಸ್ಥಾಪಕ ನಾಗೇಂದ್ರ, ತರಬೇತುದಾರ ಅಬ್ದುಲ್ಲಾ ಮತ್ತಿತರರು ಇದ್ದರು. ಕ್ಲಬ್ ಕಾರ್ಯದರ್ಶಿ ಶಿವಕುಮಾರ ಪಾಖಾಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net