ವಚನ ರಕ್ಷಣೆಗೆ ಅಕ್ಕನಾಗಮ್ಮ ಕೊಡುಗೆ ಅಪಾರ

16blk3
Published on

ಭಾಲ್ಕಿ: ವಚನ ಸಾಹಿತ್ಯ ರಕ್ಷಣೆಗೆ ಶರಣೆ ಅಕ್ಕನಾಗಮ್ಮ ತಾಯಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಬಣ್ಣಿಸಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ಮತ್ತು ಅಕ್ಕನ ಬಳಗದಿಂದ ಆಯೋಜಿಸಿದ್ದ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ರೂಪಿಸುವಲ್ಲಿ ಅಕ್ಕನಾಗಮ್ಮ ತಾಯಿ ಪಾತ್ರ ದೊಡ್ಡದಾಗಿದೆ. ಬಸವಣ್ಣನವರಿಗೆ ಜನನದಿಂದ ಲಿಂಗೈಕ್ಯ ಆಗುವವರೆಗೆ ಅವರ ಜತೆ ಸಮರ್ಪಣಾ ಭಾವದಿಂದ ಬಾಳಿದ ತಾಯಿ ಎಂದರೆ ಅಕ್ಕನಾಗಮ್ಮ. ಅವರ ತ್ಯಾಗದಿಂದಲೇ ವಚನ ಸಾಹಿತ್ಯ ಉಳಿದಿದೆ. ಅದಕ್ಕಾಗಿ ನಾವು ಶರಣೆಯರ ಸ್ಮರಣೆ ಮಾಡುವುದರೊಂದಿಗೆ ನವರಾತ್ರಿ ಆಚರಿಸಬೇಕೆಂದು ನುಡಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಉದ್ಘಾಟಿಸಿದರು. ಅಕ್ಕನ ಬಳಗದ ಮಹಿಳೆಯರು ಬಸವ ಗುರು ಪೂಜೆ ನೆರವೇರಿಸಿದರು. ಜಗದೀಶ್ವರಿ ಕಾರಬಾರಿ ಅವರು ಅಕ್ಕನಾಗಮ್ಮನ ಜೀವನ ದರ್ಶನ ಕುರಿತು ಅನುಭಾವ ನೀಡಿದರು. ಪ್ರಭಾ ಕರಕಾಳೆ, ನಿರ್ಮಲಾ ಪಾಟೀಲ್, ರೇಖಾ ಮಹಾಜನ, ಗೀತಾ ಕರಕಾಳೆ, ಸರೋಜನಿ ಪಾಟೀಲ್ ಅವರು ಅಕ್ಕನ ನಾಗಮ್ಮನವರ ಜೀವನಾಧಾರಿತ ಸ್ತಬ್ಧಚಿತ್ರ ಪ್ರದರ್ಶಿಸಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ವಚನ ಗಾಯನ ಮಾಡಿದರು. ವಿಜಯಲಕ್ಷ್ಮೀ ಹೊಸಾಳೆ ಧರ್ಮಗ್ರಂಥ ಪಠಣ ಮಾಡಿದರು. ಅಂಜಲಿ ಅಷ್ಟೂರೆ ವಚನ ನೃತ್ಯ ನಡೆಸಿಕೊಟ್ಟರು. ಸಮಿತಿ ಅಧ್ಯಕ್ಷೆ ಸುವರ್ಣಾ ಓಂಕಾರ ಬಲ್ಲೂರೆ ಸ್ವಾಗತಿಸಿದರು. ಗೀತಾ ಪಾಟೀಲ್ ನಿರೂಪಣೆ ಮಾಡಿದರು. ಶೋಭಾ ಸಾವಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net