ಪವಾಡ ಪುರುಷ ಬೊಮ್ಮಗೊಂಡೇಶ್ವರ

Gond Sang meeting
Published on

ಬೀದರ್: ಮಹಾತ್ಮ ಬೊಮ್ಮಗೊಂಡೇಶ್ವರ ಪವಾಡ ಪುರುಷರು. ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆ ಓದಲೇಬೇಕು ಎಂದು ಗೊಂಡ ಸಮಾಜದ ಹಿರಿಯ ಮುಖಂಡ ಮಾಳಪ್ಪ ಅಡಸಾರೆ ಹೇಳಿದರು.
ನಗರದ ಬೀರಲಿಂಗೇಶ್ವರ ಮಂದಿರದಲ್ಲಿ ಜಿಲ್ಲಾ ಗೊಂಡ ನೌಕರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬೊಮ್ಮಗೊಂಡೇಶ್ವರ ದೈವಿ ಪುರಷ, ಮಹಾಶರಣರಾಗಿದ್ದರು. ಅವರು ಬೀದರ್ ಕೋಟೆ ನಿರ್ಮಾಣಕ್ಕೆ ಸಹಾಯಹಸ್ತ ನೀಡಿದರು. ನೀರರಸಿ ಬಂದ ಬಹಮನಿ ಮನೆತನದ ರಾಜರು, ಸೈನಿಕರ ಆನೆ, ಕುದುರೆ, ಕಾಲಾಳುಗಳಿಗೆ ನೀರು ಕುಡಿಸಿದ ಪುಣ್ಯಾತ್ಮ ಎಂದು ಬಣ್ಣಿಸಿದರು.
ಚಿದ್ರಿ ಗ್ರಾಮದಲ್ಲಿ ಶಿವಗೊಂಡ-ಗಂಗವ್ವ ದಂಪತಿ ಪುತ್ರರಾಗಿದ್ದ ಬೊಮ್ಮಗೊಂಡೇಶ್ವರರು ಜಿಲ್ಲೆಯ ಗೊಂಡ ಸಮಾಜದ ಆರಾಧ್ಯದೈವ. ಜಿಲ್ಲೆಯ ವಿವಿಧೆಡೆ ಅವರ ಪ್ರತಿಮೆಗಳನ್ನು ನೋಡಬಹುದು. ಬೊಮ್ಮಗೊಂಡೇಶ್ವರ ಜೀವನ ಚರಿತ್ರೆ ಬಗ್ಗೆ ಅನೇಕ ಪುಸ್ತಕಗಳಿವೆ. ಅವುಗಳ ಮೂಲಕ ಚರಿತ್ರೆ ಅರಿಯಬೇಕು ಎಂದರು.
ಉಪ ನೋಂದಣಾಧಿಕಾರಿ ಸುಭಾಷ ಹೊಸಳ್ಳಿ ಉದ್ಘಾಟಿಸಿ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ವಸತಿಗೃಹಗಳ ಅಗತ್ಯವಿದೆ. ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳನ್ನು ತೆರೆಯಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಗೊಂಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಕಟಗಿ ಮಾತನಾಡಿ, ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸಂಘಟಿತರಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಗೊಂಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ರಘುನಾಥ ಭೂರೆ ಇತರರಿದ್ದರು. ವಿಜಯಕುಮಾರ ಡುಮ್ಮೆ ಪ್ರಾಸ್ತಾವಿಕ ಮಾತನಾಡಿದರು. ಕುಶಾಲ ಯರನಳ್ಳಿ ಸ್ವಾಗತಿಸಿದರು. ಶ್ರೀಪತಿ ಮೇತ್ರೆ ನಿರೂಪಣೆ ಮಾಡಿದರು.
ಡಾ.ನಾಗಮ್ಮ ಭಂಗರಗಿ, ಮಾರ್ಥಂಡಪ್ಪ, ಸಂಜೀವಕುಮಾರ ಅತಿವಾಳೆ, ರಾಮಚಂದ್ರಪ್ಪ ಮುರಾರಿ, ಮಚ್ಛೇಂದ್ರ ಗೊಂಡ, ರೋಹಿತ್, ನವನಾಥ, ಸತೀಶ್, ವೀರಗೊಂಡ ಡುಮ್ಮೆ, ಬಾಲಾಜಿ ಡುಮ್ಮೆ, ಸಂತೋಷ, ಶ್ರೀಕಾಂತಿ, ದತ್ತು ಬಾಲ್ಕಿ, ರಮೇಶ ನಂದಗಾಂವ, ರಾಜಕುಮಾರ, ಶಾಂತಕುಮಾರ, ಜ್ಞಾನೇಶ ಯರನಳ್ಳೆ, ಸುರೇಶ, ನವನಾಥ ಜೆ., ರಾಜಕುಮಾರ, ಸಂತೋಷ ಎಸ್. ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net