

ಬೀದರ್: ಯಾರೊಬ್ಬರೂ ಪರವಾನಗಿ ಇಲ್ಲದೆ ಪಟಾಕಿ ಅಂಗಡಿ ನಡೆಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಅಂಗಡಿ ತೆರೆದರೆ ಸಂಬಂಧಿತರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಗೋವಿಂದರಡ್ಡಿ ಎಚ್ಚರಿಕೆ ನೀಡಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ಪಟಾಕಿ ಅಂಗಡಿ ಪರವಾನಗಿಗೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಬರುವ ದೀಪಾವಳಿ ಹಬ್ಬದ ನಿಮಿತ್ತ ತಾತ್ಕಾಲಿಕವಾಗಿ ಪಟಾಕಿ ಅಂಗಡಿಗಳನ್ನು ಹಾಕುವ ಮಾಲೀಕರು ಮುಂಚಿತವಾಗಿ ಸಂಬಂಧಿತರಿಂದ ಪರವಾನಗಿ ಪಡೆಯಬೇಕು. ಶಾಶ್ವತವಾಗಿ ಪಟಾಕಿ ಅಂಗಡಿ ನಡೆಸುವವರು ಕಡ್ಡಾಯವಾಗಿ ಅನುಮತಿ ಹೊಂದಿರಬೇಕು. ಯಾರ ಪರವಾನಗಿ ಅವಧಿ ಮುಗಿದಿದೆಯೋ ಅಂಥವರು ತಕ್ಷಣ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾತ್ಕಾಲಿಕ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಅಂಗಡಿಗಳ ಸ್ಥಳಕ್ಕೆ ಪೊಲೀಸ್, ಕಂದಾಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ ಮೂರು ದಿನದೊಳಗೆ ಎನ್ಒಸಿ ನೀಡಬೇಕು. ಈ ಹಿಂದಿನಿಂದ ಜಿಲ್ಲಾದ್ಯಂತ ನಡೆಸುತ್ತಿರುವ ಪಟಾಕಿ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರವಾನಗಿ ಪರಿಶೀಲಿಸುವುದರ ಜತೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಯಾರು ಕೂಡ ಪರವಾನಗಿ ಇಲ್ಲದೆ ಪಟಾಕಿ ಮಾರಾಟ ಮಾಡುವಂತಿಲ್ಲ. ಪಟಾಕಿ ಅಂಗಡಿ ಹೊರತುಪಡಿಸಿ ಇತರ ಅಂಗಡಿಗಳಲ್ಲಿ ಪಟಾಕಿ ಮಾರುವುದು ಅಪರಾಧ ಎಂದರು.
ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಪಟಾಕಿ ಮಾರಾಟದ ಪರವಾನಗಿ ಇಲ್ಲದಿರುವುದು ಕಂಡು ಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಬೇಕು. ಯಾವ ಕಾರಣಕ್ಕೂ ಸ್ಥಳ ಪರಿಶೀಲನೆ ನಡೆಸದೆ ಎನ್ಒಸಿ ಕೊಡಬಾರದು. ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ನಗರಸಭೆ ಆಯುಕ್ತ ಶಿವರಾಜ ರಾಠೋಡ್ ಇತರರಿದ್ದರು.