

ಬೀದರ್: ಜೀವನದಲ್ಲಿ ಎರಡು ರೀತಿಯ ಸಂಪತ್ತು ಕಾಣಬಹುದು. ಅಂತರಂಗ ಮತ್ತು ಬಹಿರಂಗ. ಅಂತರಂಗ ಸಂಪತ್ತು ಶಾಶ್ವತವಾದದ್ದು. ಅಧ್ಯಾತ್ಮ ಪ್ರವಚನ, ಶರಣರ ಸತ್ಸಂಗದಿಂದ ಮನಸ್ಸು ಮತ್ತು ಬುದ್ಧಿ ವಿಕಾಸವಾಗುತ್ತದೆ ಎಂದು ಶ್ರೀ ಮಹಾಲಿಂಗ ಸ್ವಾಮೀಜಿ ಭಾಲ್ಕಿ ಹೇಳಿದರು.
ವಿದ್ಯಾನಗರದ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಅನುಭವ ಮಂಟಪ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಾದಿ ಶರಣರು ಅಂತರಂಗ ಸಂಪತ್ತಿಗಾಗಿ ಹಾತೊರೆಯುತಿದ್ದರು. ನಡೆ-ನುಡಿ ಒಂದಾಗಿಸಿಕೊಂಡು ಬದುಕು ಶ್ರೀಮಂತಗೊಳಿಸಿಕೊಂಡಿದ್ದರು ಎಂದರು.
ನಿವೃತ್ತ ಕೃಷಿ ಅಧಿಕಾರಿ ದಾಸಪ್ಪ ಭೋರಗುಂಡೆ ಉದ್ಘಾಟಿಸಿ ಮಾತನಾಡಿ, ಹಿರೇಮಠ ಸಂಸ್ಥಾನ ಅನಾಥ, ನಿರ್ಗತಿಕ, ಬಡ ಮಕ್ಕಳಿಗೆ ಅನ್ನ, ವಸತಿ, ಶಿಕ್ಷಣ ಜತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡುತ್ತಿದೆ. ಪ್ರತಿಭೆಯನ್ನು ಅರಳಿಸುವಂಥ ಕೆಲಸ ಶ್ರೀಮಠ ಮಾಡುತ್ತಿದೆ ಎಂದು ಶ್ಲಾಸಿದರು.
ಪ್ರವಚನಕಾರ್ತಿ ಸುವರ್ಣಾ ಚಿಮಕೋಡೆ ಮಾತನಾಡಿದರು. ಪ್ರಸಾದ ನಿಲಯ ಕಾರ್ಯದರ್ಶಿ ಎಸ್.ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಸುರೇಖಾ ಶ್ರೀಮಂತ ಬಸವ ಗುರುಪೂಜೆ ನೆರವೇರಿಸಿದರು. ಪ್ರಮುಖರಾದ ಮಹಾಲಿಂಗಪ್ಪ ಬೆಲ್ದಾಳೆ, ಮಲ್ಲಿಕಾರ್ಜುನ ಹುಡಗಿ, ಶ್ರೀಕಾಂತ ಬಿರಾದಾರ್, ಸಂಗ್ರಾಮಪ್ಪ ಬಿರಾದಾರ್, ಸಂಗ್ರಾಮ ಎಂಗಳೆ, ಗುರುನಾಥ ಬಿರಾದಾರ್, ಡಾ.ವೈಜಿನಾಥ ಬಿರಾದಾರ್, ಲಕ್ಷ್ಮೀಬಾಯಿ ರಾಮಶೆಟ್ಟಿ, ಮೀನಾಕ್ಷಿ ಪಾಟೀಲ್, ಕಸ್ತೂರಿಬಾಯಿ ಬಿರಾದಾರ್, ಭಾರತಿ ಪಾಟೀಲ್, ಮಹಾದೇವಿ ಬಿರಾದಾರ್, ಲಕ್ಷ್ಮೀ ಬಿರಾದಾರ್, ಮಾಲಾಶ್ರೀ, ರೇಣುಕಾ, ಪ್ರಸಾದ ನಿಲಯ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಇತರರಿದ್ದರು.
ಹಾವಗಿರಾವ ಮತ್ತು ಚನ್ನಬಸಪ್ಪ ನೌಬಾದೆ ವಚನ ಗಾಯನ ನಡೆಸಿಕೊಟ್ಟರು. ವಚನಸಿರಿ ಶ್ರೀಮಂತ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಣೆ ಮಾಡಿದರು. ಭೀಮಾಶಂಕರ ವಂದಿಸಿದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳಾದ ಪ್ರೇಮಶೇಖರ, ಮಹೇಂದ್ರ ಮೌರ್ಯ ಹಾಗೂ ದತ್ತು ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.