

ಔರಾದ್: ಕೆಲ ಇಲಾಖೆ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ, ಸಮಯಕ್ಕೆ ಸರಿಯಾಗಿ ಕೆಲಸಗಳಾಗುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ. ಇಂಥ ಅಧಿಕಾರಿಗಳ ವಿರುದ್ಧ ಕಠಿಣ ಜರುಗಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅವರು ತಹಸೀಲ್ದಾರ್, ತಾಪಂ ಇಒಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ(ಪ್ರಗತಿ ಪರಿಶೀಲನಾ) ಸಭೆಯಲ್ಲಿ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ಎಲ್ಲಿಂದರಲ್ಲಿ ಕಸದ ರಾಶಿ ಕಾಣಿಸುತ್ತಿದೆ. ಪಿಡಿಒಗಳ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಹಳ್ಳಿಗಳನ್ನು ಶುಚಿಯಾಗಿಡಬೇಕು. ಬೀದಿ ದೀಪ ಅಳವಡಿಸಬೇಕು. ಕುಡಿವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಪಿಡಿಒಗಳು ತಮ್ಮ ಮೊಬೈಲ್ ಚಾಲ್ತಿಯಲ್ಲಿಟ್ಟು ಜನರ ಕರೆಗಳಿಗೆ ಸ್ಪಂದಿಸಬೇಕು. ತಾಪಂ ಇಒ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಪಂ ಅಧಿಕಾರಿಗಳ ಕಾರ್ಯವೈಖರಿ ಗಮನಿಸುತ್ತಿರಬೇಕು ಎಂದು ನಿರ್ದೇಶನ ನೀಡಿದರು.
ಬಡ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಸತಿ ಯೋಜನೆಯಡಿ ಕ್ಷೇತ್ರಕ್ಕೆ 3000ಕ್ಕೂ ಹೆಚ್ಚು ಮನೆ ಹೆಚ್ಚುವರಿಯಾಗಿ ಮಂಜೂರು ಮಾಡಿಸಿದ್ದೇನೆ. ಕೆಲವೆಡೆ ಈವರೆಗೆ ಕೆಲಸ ಆರಂಭಿಸಿಲ್ಲ. ಬಿಲ್ ಪಾವತಿಸಲು ಜನರನ್ನು ಪೀಡಿಸುವುದು, ಅನರ್ಹರಿಗೆ ಮನೆ ಹಂಚಿಕೆ, ಬೋಗಸ್ ಬಿಲ್, ಹಣದ ಬೇಡಿಕೆ ಇಟ್ಟಿರುವ ದೂರುಗಳು ಬರುತ್ತಿವೆ. ಇಂಥ ಅಕ್ರಮ ಕೆಲಸಕ್ಕೆ ಆಸ್ಪದ ಕೊಡಬಾರದು. ಕೂಡಲೇ ಬಾಕಿ ಉಳಿದ ಕೆಲಸಗಳನ್ನು ಶೀಘ್ರ ಆರಂಭಿಸಿ ನಿಗದಿತ ಗುರಿ ಸಾಸಲು ಮುತುವರ್ಜಿ ವಹಿಸಬೇಕು. ಯಾವ ಕಾರಣಕ್ಕೂ ಜನರಿಗೆ ಪೀಡಿಸಬಾರದು ಎಂದು ತಾಕೀತು ಮಾಡಿದರು.
ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಪಿಎಂಜಿಎಸ್ವೈ, ನಿರ್ಮಿತಿ ಕೇಂದ್ರ ಸೇರಿ ವಿವಿಧ ಇಲಾಖೆಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇವುಗಳೆಲ್ಲವನ್ನು ಗುಣಮಟ್ಟ ಮತ್ತು ಕಾಲಮಿತಿಯೊಳಗೆ ಮುಗಿಸಬೇಕು ಎಂದರು.
ಗ್ರಾಮ ಸಂಚಾರ ವೇಳೆ ಕೆಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ 6ನೇ ತರಗತಿ ಮಕ್ಕಳು ಪುಸ್ತಕ ಓದಲು ತಡಬಡಾಯಿಸಿರುವುದು ಕಾಣಿಸಿದೆ. ಹೀಗಾಗಿ ಎಲ್ಲ ಶಿಕ್ಷಕರು ಸರಿಯಾಗಿ ಕೆಲಸ ಮಾಡಬೇಕು. ಸಿಆರ್ಪಿ ಮತ್ತು ಬಿಆರ್ಪಿಗಳು ಸಾಕಷ್ಟು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ಬೇರೆಡೆಗೆ ವರ್ಗಾಯಿಸಿ ಆಡಳಿತ ವ್ಯವಸ್ಥೆ ಸುಧಾರಿಸಬೇಕು. ಫಲಿತಾಂಶ ಸುಧಾರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಎಲ್ಲ ಶಾಲೆಗಳಲ್ಲಿ ಶೌಚಗೃಹ, ಕುಡಿಯುವ ನೀರು, ಆಟದ ಮೈದಾನ, ಕಂಪೌಂಡ್ ಗೋಡೆ ಇರುವಂತೆ ನೋಡಿಕೊಳ್ಳಬೇಕೆಂದು ಪದೇಪದೆ ತಿಳಿಸಲಾಗಿದೆ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಕೆಲವೆಡೆ ಶಾಲಾ ಮಕ್ಕಳಿಗೆ ಕೊಡಬೇಕಾದ ಹಾಲಿನ ಪೌಡರ್, ಮೊಟ್ಟೆಗಳನ್ನು ಮಾರಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ಜಿಪಂ ಡಿಆರ್ಡಿಎ ಯೋಜನಾ ನಿರ್ದೇಶಕ, ತಾಪಂ ಆಡಳಿತಾಕಾರಿ ಜಗನ್ನಾಥ ಮೂರ್ತಿ, ತಹಸೀಲ್ದಾರ್ರಾದ ಮಲಶೆಟ್ಟಿ ಚಿದ್ರೆ, ಅಮಿತ್ ಕುಲಕರ್ಣಿ, ತಾಪಂ ಇಒಗಳಾದ ಬೀರೇಂದ್ರಸಿಂಗ್ ಠಾಕೂರ್, ಮಾಣಿಕರಾವ ಪಾಟೀಲ್ ಇತರರಿದ್ದರು.
ಆಸ್ಪತ್ರೆಗಳನ್ನು ಸುಧಾರಿಸಿ
ಕ್ಷೇತ್ರದ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಆರೋಗ್ಯಾಧಿಕಾರಿಗೆ ಸೂಚಿಸಿದರು. ಗ್ರಾಮ ಸಂಚಾರ ವೇಳೆ ಕೆಲ ಆಸ್ಪತ್ರೆಗಳಲ್ಲಿ ಅಶುಚಿತ್ವ ಕಂಡಿದೆ. ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಂದ ಹೆಚ್ಚು ದೂರು ಬರುತ್ತಿರುವುದು ಸರಿಯಲ್ಲ. ತಾಲೂಕು ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಸರಿಯಾಗಿ ಕೆಲಸ ಮಾಡಬೇಕು. ಇಲ್ಲಿ ಸಂಗ್ರಹವಾದ ರಕ್ತವನ್ನು ಬೇರೆಡೆ ಕಳುಹಿಸದೆ ಕ್ಷೇತ್ರದ ಜನತೆಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ತಾಲೂಕಿನಲ್ಲಿ ವೈದ್ಯರ ಕೊರತೆ ಸಾಕಷ್ಟಿದೆ. ಆದರೂ ಕೆಲ ವೈದ್ಯರು ವಗರ್ಾವಣೆಯಾಗಿ ಹೋಗುತ್ತಿದ್ದಾರೆ. ಕೆಲವರು ನಿಯೋಜನೆ ಮೇರೆಗೆ ಬೇರೆಡೆ ಹೋಗುವುದು ಕಂಡುಬಂದಿದೆ. ಇಲ್ಲಿನ ವೈದ್ಯರನ್ನು ಯಾವ ಕಾರಣಕ್ಕೂ ಬೇರೆಡೆ ಹೋಗಲು ಬಿಡಬಾರದು ಎಂದು ಸೂಚಿಸಿದರು.