ಅಂಚೆ ಸೇವೆ ಪ್ರಯೋಜನ ಪಡೆಯಿರಿ

postal Customers Meet Photo
Published on

ಬೀದರ್: ಗ್ರಾಹಕರು ಅಂಚೆ ಇಲಾಖೆಯ ವಿವಿಧ ಸೇವೆಗಳ ಪ್ರಯೋಜನ ಪಡೆಯಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಹೇಳಿದರು.
ರಾಷ್ಟ್ರೀಯ ಅಂಚೆ ಸಪ್ತಾಹ ಅಂಗವಾಗಿ ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಚೆ ಗ್ರಾಹಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಂಚೆ ಇಲಾಖೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರ ಪ್ರತಿಯೊಂದು ಬೇಡಿಕೆಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಆಧಾರ್, ಪಾಸ್‍ಪೋರ್ಟ್ ನೋಂದಣಿ, ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಅನ್ಸಾರಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಅನೇಕ ಉತ್ತಮ ಯೋಜನೆಗಳು ಇವೆ. ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದರು.
ಇಲಾಖೆಯ ಧಾರವಾಡದ ವ್ಯಾಪಾರ ಅಭಿವೃದ್ಧಿ ವಿಭಾಗದ ಉಪ ಅಧೀಕ್ಷಕ ಮಲ್ಲಪ್ಪ ಕೊತ್ತಲ್ ಮಾತನಾಡಿ, ಅಂಚೆ ಸಪ್ತಾಹ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಂಚೆ ಅಧೀಕ್ಷಕ ಶ್ರೀಕರ ಬಾಬು ಮಾತನಾಡಿ, ಗ್ರಾಹಕರ ಸಂತೃಪ್ತಿಯೇ ಇಲಾಖೆಯ ಗುರಿಯಾಗಿದೆ. ಹೀಗಾಗಿ ಸಿಬ್ಬಂದಿ ಗ್ರಾಹಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.
ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್ ಮಾತನಾಡಿ, ಆರು ತಿಂಗಳಿಂದ ಬೀದರ್ ವಿಭಾಗ ವಿವಿಧ ಸೇವೆಗಳಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ರಾಷ್ಟ್ರಧ್ವಜ ಮಾರಾಟದಲ್ಲಿ ರಾಜ್ಯದಲ್ಲೇ ಪ್ರಥಮ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆ ತೆರೆಯುವಿಕೆ, ರೈಲ್ವೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ರಾಜ್ಯದ ಮೊದಲ ಮೂರು ಸ್ಥಾನಗಳಲ್ಲಿದೆ ಎಂದು ಹೇಳಿದರು.
ಗಾಯಕಿ ಶಿವಾನಿ ಸ್ವಾಮಿ ಹಾಗೂ ಇಲಾಖೆ ಚಿದಾನಂದ ಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಭಾರತಿ ವಸ್ತ್ರದ್, ಇಲಾಖೆಯ ಸಿಬ್ಬಂದಿ ಹಾಗೂ ಅಂಚೆ ಗ್ರಾಹಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net