ಪಶು ಸಂಗೋಪನಾ ಇಲಾಖೆಗೆ ಚುರುಕು ನೀಡಿ

cm
Published on

ಬೀದರ್: ರೈತರ ಹಿತದೃಷ್ಟಿಯಿಂದ ಗೋಹತ್ಯೆ ನಿಷೇಧ ಕಾನೂನು ರದ್ದು ಮಾಡಬೇಡಿ ಹಾಗೂ ಪಶು ಸಂಗೋಪನಾ ಇಲಾಖೆಗೆ ಚುರುಕು ನೀಡಿ ಎಂದು ಔರಾದ್ ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಚವ್ಹಾಣ್ ಅವರು, ಪಶುಸಂಗೋಪನೆ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆಗಳು ಹಾಗೂ ಇದರಿಂದ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಒತ್ತಾಯಿಸಿದರು.
ಗೋಹತ್ಯೆ ತಡೆಯಿರಿ: ರಾಜ್ಯದಲ್ಲಿ ಮೂರ್ನಾಲ್ಕು ತಿಂಗಳಿನಿಂದ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಮೂಕಪ್ರಾಣಿಗಳ ರಕ್ಷಣೆ ಆಗುತ್ತಿಲ್ಲ. ಕಸಾಯಿಖಾನೆಗೆ ಸಾಗಣೆಯಾಗುತ್ತಿರುವ ಗೋವುಗಳನ್ನು ರಕ್ಷಿಸಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅನಿಯಮ-2020 ಯಾವುದೇ ಕಾರಣಕ್ಕೂ ಹಿಂಪಡೆಯದೆ ಅದನ್ನು ಮತ್ತಷ್ಟು ಬಿಗಿಗೊಳಿಸಿ ಎಂದು ಆಗ್ರಹಿಸಿದರು.
ಹಿಂದಿನ ಸರ್ಕಾರದ ಅವಯಲ್ಲಿ 100 ಸರ್ಕಾರಿ ಗೋಶಾಲೆಗಳನ್ನು ತೆರೆಯಲು ಕ್ರಮ ವಹಿಸಲಾಗಿತ್ತು. ಈಗ ಅನುದಾನ ಹಾಗೂ ಕಾಳಜಿ ಇಲ್ಲದೆ ಗೋಶಾಲೆಗಳನ್ನು ನಡೆಸುವುದು ಕಷ್ಟಕರವಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಇಲಾಖೆ ಮಂತ್ರಿಗಳು ಗಮನಹರಿಸಬೇಕು. ಗೋವುಗಳ ಸಂರಕ್ಷಣೆ ಮಾಡುವ ದೃಷ್ಟಿಯಿಂದ ಜಾರಿಗೆ ತಂದ ದತ್ತು ಯೋಜನೆ ಸ್ಥಗಿತವಾಗಿದ್ದು, ಕೂಡಲೇ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.
ಗುಜರಿಗೆ ಪಶು ಆ್ಯಂಬುಲೆನ್ಸ್: ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು ಕೇಂದ್ರ ಸರ್ಕಾರ ಈ ಯೋಜನೆಯನ್ನು ದೇಶಾದ್ಯಂತ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತ್ತು. ಆದರೆ ರಾಜ್ಯದಲ್ಲಿ ಅನುಷ್ಠಾನವಾದ ಈ ಯೋಜನೆ ಮೂಲೆಗುಂಪಾಗುತ್ತಿದೆ. 108 ಮಾದರಿಯ ವಾಹನಗಳು ಕೆಟ್ಟು ನಿಂತು ಗುಜರಿ ಸೇರುವಂತಾಗಿವೆ. ಇದಕ್ಕೆ ಸಮರ್ಪಕ ಅನುದಾನ ನೀಡಿ, ಎಲ್ಲೆಡೆ ಇವು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಚವ್ಹಾಣ್ ಅವರು ಸಿಎಂಗೆ ಬೇಡಿಕೆ ಮಂಡಿಸಿದರು.
ಪಶುಪಾಲಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಾಪಿತವಾದ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪ್ರಾಣಿ ಕಲ್ಯಾಣ ಸಹಾಯವಾಣಿಯಂತಹ ವಿಶಿಷ್ಟವಾದ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಇದರಿಂದ ಪಶು ಸಂಗೋಪನೆ ಇಲಾಖೆ ಸೊರಗಿದೆ. ಇದರ ನೇರ ಪರಿಣಾಮ ಪಶುಪಾಲಕರು, ರೈತರು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net