

ಬೀದರ್: ಬಿಜೆಪಿ ವಶದಲ್ಲಿದ್ದ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರರ ಕ್ಷೇತ್ರ ಸದ್ಯ ಕಾಂಗ್ರೆಸ್ ನಲ್ಲಿದೆ. ಬರುವ ಚುನಾವಣೆಯಲ್ಲಿ ಇದನ್ನು ಮರಳಿ ಪಡೆಯಬೇಕು. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಇದಕ್ಕೆ ಸನ್ನದ್ಧರಾಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಈಶಾನ್ಯ ಪದವೀಧರರ ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ ಕಾರ್ಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಪ್ರತಿ ವಿಧಾನಸಭೆ ಕ್ಷೇತ್ರದಿಂದ 10 ಸಾವಿರ ಮತಗಳು ಎಂಎಲ್ಸಿ ಚುನಾವಣೆಯಲ್ಲಿ ಪಡೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ದಕ್ಷಿಣ ಕ್ಷೇತ್ರದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುವುದು. ಈ ಬಾರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ನೋಂದಣಿ ಕಾರ್ಯದಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.
ನೋಂದಣಿ ಮತ್ತು ಪರಿಷ್ಕರಣೆ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ ಸಮಿತಿ ಜಿಲ್ಲಾ ಸಂಚಾಲಕ ಬಾಬು ವಾಲಿ ಮಾತನಾಡಿದರು. ಬಿಜೆಪಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಬಿನ್ನಾಡಿ, ಸಹ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಡೋಣಿ, ನಗರ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ಜಯಕುಮಾರ ಕಾಂಗೆ, ಸೋಮನಾಥ ಪಾಟೀಲ್ ಇತರರಿದ್ದರು. ರಾಜು ಬಿರಾದಾರ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಕುಂಬಾರ, ಅರಹಂತ ಸಾವಳೆ ನಿರೂಪಣೆ ಮಾಡಿದರು.
ಪ್ರತಿ ಗ್ರಾಪಂಗೆ 200 ಮತದಾರರ ಗುರಿ
ಮುಂಬರುವ ಈಶಾನ್ಯ ಪದವೀಧರ ಮತ ಕ್ಷೇತ್ರದ ಚುನಾವಣೆ ವೇಳೆಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೆ 200 ಮತದಾರರನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ ಕಾರ್ಯದ ಸಮಿತಿ ಜಿಲ್ಲಾ ಸಂಚಾಲಕ ಬಾಬು ವಾಲಿ ಹೇಳಿದರು. ಜಿಲ್ಲೆಯ ಎಲ್ಲ ಮಂಡಲ, ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಪರಿಷ್ಕರಣೆ ಮತ್ತು ನೋಂದಣಿ ಸಮಿತಿ ರಚಿಸಿ, ಸಂಚಾಲಕ, ಸಹ ಸಂಚಾಲಕರನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಈ ಸ್ಥಾನ ಬಿಜೆಪಿ ಮಡಿಲಿಗೆ ತೆಗೆದುಕೊಳ್ಳುವುದು ನಮ್ಮ ಗುರಿ ಎಂದು ಹೇಳಿದರು.