

ಭಾಲ್ಕಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ತಂದೆ-ತಾಯಿ ಜತೆಗೆ ಪಟ್ಟಣದ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ಗುರುಬಸವ ಪಟ್ಟದ್ದೇವರು ದರ್ಶನ ಮಾಡಿ ಆಶೀರ್ವಾದ ಪಡೆದ ಸಿಇಒ ಶಿಲ್ಪಾ ಮಾತನಾಡಿ, ಪೂಜ್ಯರು ಗಡಿಭಾಗದಲ್ಲಿ ಮಾಡುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯ ಶ್ಲಾಘನೀಯ. ಶ್ರೀಮಠದಲ್ಲಿ ಬಡ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಅನಾಥ ಮಕ್ಕಳ ಆರೈಕೆ ಮಾಡುತ್ತಿರುವ ಪೂಜ್ಯರ ಕಾರ್ಯ ಮಾದರಿ ಎಂದು ಬಣ್ಣಿಸಿದರು.
ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರಾರಂಭಿಸುವ ಮೂಲಕ ಈ ಭಾಗದ ಪ್ರತಿಭಾವಂತ ಮಕ್ಕಳಿಗೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಸಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಅವರ ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಂಡು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಮಠದ ಸೇವೆ ಅದಕ್ಕೆ ಕಾರಣ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರೋಹಿತ ವೈರಾಗೆ, ಶ್ರೀಕಾಂತ ವೈರಾಗೆ ಇದ್ದರು.