

ಬೀದರ್: ಮಳೆ ಅಭಾವದ ಕಾರಣ ಗಡಿ ಜಿಲ್ಲೆ ಬೀದರ್ ಬರದ ದವಡೆಗೆ ಸಿಲುಕಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಬಸವಕಲ್ಯಾಣ, ಭಾಲ್ಕಿ ಮತ್ತು ಹುಲಸೂರು ತಾಲೂಕು ಮಾತ್ರ ಬರಪೀಡಿತ ಘೋಷಿಸಿ ಇನ್ನುಳಿದ ಐದು ತಾಲೂಕುಗಳನ್ನು ನಿರ್ಲಕ್ಷಿಸಿದೆ ಎಂದು ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ದೂರಿದ್ದಾರೆ.
ಬರಪೀಡಿತ ಪಟ್ಟಿ ಬಿಡುಗಡೆ ಬಳಿಕ ಕಂದಾಯ ಸಚಿವರನ್ನು ಭೇಟಿಯಾಗಿ ಇಡೀ ಜಿಲ್ಲೆ ಬರಪೀಡಿತ ಘೋಷಿಸುವಂತೆ ಕೋರಲಾಗಿತ್ತು. ಆದರೆ ಸಚಿವರು ಮರು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀದರ್ ಮತ್ತು ಚಿಟಗುಪ್ಪ ತಾಲೂಕು ವ್ಯಾಪ್ತಿಯ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕೃಷಿ ಅವಲಂಬಿತ ಜನರು ಹೆಚ್ಚಿದ್ದಾರೆ. ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ಪ್ರದೇಶ ಪಟ್ಟಿಯಲ್ಲಿ ಸೇರಿಸಬೇಕೆಂಬ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹ ಸ್ಪಂದಿಸದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕ್ಷೇತ್ರದಲ್ಲಿ ನಿರೀಕ್ಷಿತ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಬಿತ್ತಿದ ಉದ್ದು, ಹೆಸರು, ಸೋಯಾಬೀನ್, ತೊಗರಿ ನೀರಿನ ಅಭಾವದಿಂದ ಬೆಳವಣಿಗೆಯಲ್ಲಿ ಕುಂಠಿತಗೊಂಡು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಜಿಲ್ಲಾದ್ಯಂತ ಸಂಕಷ್ಟ ಪರಿಸ್ಥಿತಿ ಇದ್ದರೂ ಮೂರು ತಾಲೂಕು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿರುವುದು ಖಂಡನೀಯ. ಕೂಡಲೇ ಮರು ಪರಿಶೀಲಿಸುವಂತೆ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.