ಮಾನಸಿಕ ಆರೋಗ್ಯಕ್ಕೆ ಆದ್ಯತೆ ಕೊಡಿ

BVB Collage
Published on

ಬೀದರ್: ದೈಹಿಕ ಆರೋಗ್ಯಕ್ಕೆ ಎಷ್ಟು ಒತ್ತು ಕೊಡುತ್ತಿರೋ, ಅಷ್ಟೇ ಮಾನಸಿ ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ನಗರದ ಬಿವಿಬಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ದೊಡ್ಡ ಸಮಸ್ಯೆ ಮಾನಸಿಕ ಒತ್ತಡ. ಎಳೆಯ ಪ್ರಾಯದಿಂದ ವೃದ್ಧಾಪ್ಯದ ವಯೋಮಾನದ ಅನೇಕರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ನಿರಂತರ ಒತ್ತಡದಲ್ಲೇ ಜೀವನ ನಡೆಸಿ ಅದು ಕೆಲವೊಮ್ಮೆ ಖಿನ್ನತೆಗೂ ಕಾರಣವಾಗುವುದನ್ನು ಗಮನಿಸಬಹುದು ಎಂದರು.
ಮನಸ್ಸಿನ ಕಾಯಿಲೆ ಸುಲಭವಾಗಿ ಕಾಣಿಸುವುದಿಲ್ಲ. ಹೀಗಾಗಿ ನಾವುಗಳು ಅದನ್ನು ಆರಂಭದಲ್ಲಿ ಸಹಿಸಿಕೊಳ್ಳುವುದರ ಕಡೆಗೆ ಒಲವು ತೋರಿಸುತ್ತೇವೆ. ಎಷ್ಟೋ ಬಾರಿ ಹಲವು ವಿಷಯಗಳನ್ನು ಮನಸ್ಸಿನಲ್ಲಿ ಅದುಮಿಟ್ಟು ತಮಗೇನೂ ಆಗಿಲ್ಲ ಎಂಬಂತೆ ನಟಿಸುತ್ತೇವೆ. ಒಳಗಿನಿಂದ ಕೊರಗುತ್ತಿರುವುದು ಇತರರಿಗೆ ಗೊತ್ತೆ ಆಗುವುದಿಲ್ಲ. ಇದರ ಜತೆಗೆ ಮನಸ್ಸಿನ ಏರುಪೇರುಗಳನ್ನು ಹೇಳಿಕೊಳ್ಳುವುದರ ಕುರಿತು ಹೆಚ್ಚಿನ ಜನಕ್ಕೆ ಹಿಂಜರಿಕೆ ಇದೆ. ತಮಗೆ ಎಲ್ಲಿ ಹುಚ್ಚರೆಂದು ಹಣೆಪಟ್ಟಿ ಕಟ್ಟಿಬಿಡುತ್ತಾರೋ ಎಂಬ ಭಯದಿಂದ ಇತರರೊಂದಿಗೆ ಹಂಚಿಕೊಳ್ಳುವುದೇ ಇಲ್ಲ. ಆದ್ದರಿಂದ ಯಾವುದೇ ಮಾನಸಿಕ ಸಮಸ್ಯೆ ಇದ್ದಾಗಲೂ, ಆರಂಭದಲ್ಲೇ ಸರಿಯಾದ ತಜ್ಞರನ್ನು ಭೇಟಿ ಮಾಡಿ ಅವರಿಂದ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಪ್ರದೀಪ ಕೊಳ್ಳ ಉದ್ಘಾಟಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ ಪಾಟೀಲ್ ಮಾತನಾಡಿದರು. ಮನೋವೈದ್ಯ ಡಾ.ಅಭಿಜೀತ್ ಪಾಟೀಲ್, ಬಸವೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕನಕಟ್ಟೆ, ಬಿವಿಬಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ ವಿಠಲರಡ್ಡಿ, ಡಾ.ಅಮಲ್ ಶರೀಫ್, ವೀರಶೆಟ್ಟಿ ಚನ್ನಶೆಟ್ಟಿ, ಡಾ.ಮಲ್ಲಿಕಾರ್ಜುನ ಕೋಟೆ, ಮಲ್ಲಿಕಾಜರ್ುನ ಎಸ್. ಗುಡ್ಡೆ, ಶಿಮಪ್ಪ ಬಿ. ಸರಕುರೆ, ಪರಶುರಾಮ ಜಿ. ತಗನೂರ್, ಪ್ರಮೋದ್, ವೀಣಾ ಜಲಾದೆ, ಸಂತೋಷ ಸಜ್ಜನ್ ಇತರರಿದ್ದರು.

ಐವರಲ್ಲಿ ಒಬ್ಬ ಮಾನಸಿಕ ರೋಗಕ್ಕೆ ತುತ್ತು
ಪ್ರಪಂಚದಲ್ಲಿಯೇ ಹೆಚ್ಚು ಕಂಡು ಬರುವಂಥ ರೋಗ ಮಾನಸಿಕ ಆರೋಗ್ಯ. ಭಾರತದಲ್ಲಿ 145 ಕೋಟಿ ಜನಸಂಖ್ಯೆ ಹೊಂದಿದ್ದು, ಪ್ರತಿ ಐದು ಜನರಲ್ಲಿ ಒಬ್ಬರಿಗೆ ಹಾಗೂ ಏಳು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಾನಸಿಕ ರೋಗದಿಂದ ತುತ್ತಾಗುತ್ತಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ.ಕಿರಣ ಪಾಟೀಲ್ ಹೇಳಿದರು. ಈಚೆಗೆ ಮೊಬೈಲ್ ಬಳಕೆ ಮೂಲಕ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥೆಗೆ ಜಾರುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಬೇಕಾದರೆ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಜೀವನ ಸುಗಮವಾಗಿ ನಡೆಸಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net