

ಚಿಟಗುಪ್ಪ: ಬಹಿರ್ದೆಸೆಗೆ ಕೆರೆ ಹತ್ತಿರ ಹೋಗಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಬೇಮಳಖೇಡ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಬೇಮಳಖೇಡದ ಸಹೋದರರಾದ ಗಣೇಶ ಎ.(17), ಸಾಯಿ ಎ. (16) ಮೃತರು. ಇಬ್ಬರೂ ಊರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಸೋಮವಾರದಿಂದ ಶಾಲೆಗೆ ದಸರಾ ರಜೆ ಇರುವುದರಿಂದ ಸಂಜೆ ಕೆರೆ ಬಳಿ ಬಹಿರ್ದೆಸೆಗೆ ಹೋಗಿದ್ದರು. ಈ ವೇಳೆ ಕೆರೆಯಲ್ಲಿ ಒಬ್ಬ ಆಕಸ್ಮಿಕವಾಗಿ ಮುಳುಗುತ್ತಿದ್ದಾಗ ಉಳಿಸಲು ಹೋದ ಇನ್ನೊಬ್ಬನೂ ಮುಳುಗಿದ್ದಾನೆ. ಮಂಗಳವಾರ ಬೆಳಗ್ಗೆ ಮೃತದೇಹಗಳು ತೇಲಿವೆ. ತಂದೆ ಇಲ್ಲದ ಮಕ್ಕಳು ಮನೆಗೆ ಬರದಿದ್ದಾಗ ತಾಯಿ ಪಾರ್ವತಿ ರಾತ್ರಿ ಹುಡುಕಾಡಿದ್ದರೂ ಪತ್ತೆಯಾಗಿರಲಿಲ್ಲ.
ತಹಸೀಲ್ದಾರ್ ರವೀಂದ್ರ ದಾಮಾ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ, ಸಿಪಿಐ ಮಹೇಶಕುಮಾರ ಪಾಟೀಲ್, ಉಪ ತಹಸೀಲ್ದಾರ್ ನಸೀರ್ ಸಾಬ್, ಕಂದಾಯ ನಿರೀಕ್ಷಕ ಮಹೇಶ ಅನಂತವಾಡಕರ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರ ತೆಗೆಸಿದ್ದಾರೆ. ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕರ ತಾಯಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.